ಟಿಪ್ಪುವಿನ ಆಡಳಿತ ಅತ್ಯುತ್ತಮ

-ಶ್ರೀ ಬಿ.ಆರ್.ಜಯರಾಮರಾಜೇಅರಸ್.
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಟಿಪ್ಪುಸುಲ್ತಾನ್ ಕಾಲದ ಆಡಳಿತ ಉತ್ತಮವಿದ್ದು ಸಮರಜ್ಞಾನ, ಆಡಳಿತ, ವಿಜ್ಞಾನ, ಕೃಷಿ ನೀರಾವರಿ ಕ್ಷೇತ್ರಗಳಲ್ಲಿನ ಸಾಧನೆ ಸ್ಮರಣೀಯವಾದುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಶ್ರೀ ಬಿ.ಆರ್.ಜಯರಾಮರಾಜೇಅರಸ್ ತಿಳಿಸಿದರು.
ಅವರು ಮೈಸೂರಿನಲ್ಲಿ ಇಂದು ಪ್ರಾಚ್ಯ ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯವು ಏರ್ಪಡಿಸಿರುವ  ಟಿಪ್ಪುವಿನ ಜೀವನ ಮತ್ತು ಸಾಧನೆಗಳು” ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಟಿಪ್ಪುಸುಲ್ತಾನ್ ಹುಟ್ಟು ವಿಶೇಷವಾದುದು. ರಾಜ್ಯದ ದೇವನಹಳ್ಳಿಯಲ್ಲಿ ಜನಿಸಿ ವಿಶ್ವದೆಲ್ಲೆಡೆ ಹೆಸರು ಮಾಡಿದ್ದಾರೆ. ಕೆಲ ವಿದ್ವಾಂಸರು ಟಿಪ್ಪುಸುಲ್ತಾನನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಕರೆದಿದ್ದಾರೆ. ಮೊದಲ ಮತ್ತು ಎರಡನೇ ಮೈಸೂರು ಯುದ್ಧದಲ್ಲಿ ಅವರ ಸಾಧನೆ ಸ್ಮರಣೀಯ ರೇಷ್ಮೆ ಕೃಷಿ ಹಾಗೂ ನೀರಾವರಿಗೆ ಸಂಬಂಧಿಸಿದಂತೆ ಟಿಪ್ಪುಸುಲ್ತಾನರಿಗಿದ್ದ ಮುನ್ನೋಟ ಗಮನಾರ್ಹ. ಕನ್ನಂಬಾಡಿ ಅಣೆಕಟ್ಟೆಯಂತಹ ನೀರಾವರಿ ಕಾಮಗಾರಿಗಳು,ರಾಕೆಟ್ ಉಡಾವಣೆ ಉಲ್ಲೇಖನಾರ್ಹವಾದುದು ಎಂದು ಶ್ರೀ ಜಯರಾಮರಾಜೇ ಅರಸ್ ಹೇಳಿದರು.
ಈ ಮೂರುದಿನಗಳ ವಿಚಾರಸಂಕಿರಣದಲ್ಲಿ ಒಟ್ಟು ಎಂಟು ಗೋಷ್ಠಿಗಳು ಆಯೋಜಿತವಾಗಿದ್ದು ತಜ್ಞರಿಂದ ಐವತ್ತು ಪ್ರಬಂಧಗಳು ಮಂಡನೆಯಾಗಲಿವೆ. ಇದರಲ್ಲಿ ಟಿಪ್ಪುಸುಲ್ತಾನರ ಬೆಳವಣಿಗೆ, ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಆಗಲಿ ಎಂದು ಕಾರ್ಯದರ್ಶಿ ಶ್ರೀ ಜಯರಾಮರಾಜೇಅರಸ್ ಆಶಿಸಿದರು.
ಸಂಸತ್ ಸದಸ್ಯ ಶ್ರೀ ಆರ್.ಧ್ರುವನಾರಾಯಣ್ ಮಾತನಾಡಿ ಮೈಸೂರಿನ ಹುಲಿ ಟಿಪ್ಪುಸುಲ್ತಾನ್ ಎಂಬುದು ಹೆಮ್ಮೆ ತರುವ ವಿಷಯ. ಟಿಪ್ಪುವಿನ ಸ್ಮಾರಕಗಳನ್ನು ಪತ್ತೆ ಹಚ್ಚಿ ದಾಖಲೀಕರಣ ಮಾಡಬೇಕು. ಬ್ರಿಟೀಷ್‌ರಿಂದ ಟಿಪ್ಪು ಕುರಿತು ಇತಿಹಾಸ ತಿರುಚಲಾಗಿದೆ. ಬ್ರಿಟೀಷ್‌ರ ವಿರುದ್ಧ ಹೋರಾಡಿದ ಅಪ್ರತಿಮ ವೀರ, ಸಮರ ನಿಪುಣ, ಜಾತ್ಯಾತೀತ ಮನೋಭಾವದ ಟಿಪ್ಪುವಿನ ಬಗ್ಗೆ ಅಪಪ್ರಚಾರ ಹೋಗಬೇಕು ಎಂದು ಹೇಳಿದರು.
ಎಡ್ನೋ ಮೆರೀನ್ ಆರ್ಕಿಯಾಲಜಿ ಪುಸ್ತಕ ಬಿಡುಗಡೆ ಮಾಡಿದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಡಾ:ನೈಜಿಲ್ ಚಾನ್ಸಲರ್ ಅವರು ಟಿಪ್ಪುವಿನ ಕೊಡುಗೆ ಸ್ಮರಣೀಯ ಎಂದರು.

ಶಾಸಕ ಶ್ರೀ ಕೆ.ಟಿ.ಶ್ರೀಕಂಠೇಗೌಡ ಅವರು ಮಾತನಾಡಿ ಟಿಪ್ಪುವಿನ ಸಾಧನೆ ಜೀವನ ರೋಚಕವಾದುದು. ಆಡಳಿತ ನಡೆಸಿದ್ದು ಕಡಿಮೆ ಅವಧಿಯಾದರೂ ಸಾಧನೆ ಹಿರಿದು. ಈ ಅಂತರರಾಷ್ಟ್ರೀಯ ವಿಚಾರಸಂಕಿರಣ ಚಾರಿತ್ರಿಕ ಹಿನ್ನೆಲೆ ಹೊಂದಿದ ಶ್ರೀರಂಗಪಟ್ಟಣದ ದರಿಯಾದೌಲತ್‌ನಲ್ಲಿ ಏರ್ಪಡಿಸಿದ್ದರೆ ಅರ್ಥಪೂರ್ಣವಾಗುತ್ತಿತ್ತು. ಟಿಪ್ಪುವಿನ ವಂಶಸ್ಥರಿಗೆ ಸರ್ಕಾರ ಘೋಷಿಸಿದ್ದ ನೆರವು ಕೂಡಲೇ ದೊರಕಬೇಕು. ಐತಿಹಾಸಿಕ ಚಾರಿತ್ತಿಕ ನೆಲೆಯಾದ ಶ್ರೀರಂಗಪಟ್ಟಣದಲ್ಲಿ ಸ್ಮಾರಕ ಉಳಿಸಿ ಬೆಳೆಸುವ ಹೊಣೆ ಕೇಂದ್ರಸರ್ಕಾರ ಹಾಗೂ ರಾಜ್ಯ ಸರ್ಕಾರಗಳದ್ದಾಗಿದೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ.ಬಿ.ಶೇಕ್ ಆಲಿ ಅವರು ಟಿಪ್ಪುವಿನ ಕನಸುಗಳು ಸಾಕಾರಗೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಶಾಸಕ ಶ್ರೀ ತನ್ವೀರ್‌ಸೇಠ್ ಅವರು ಮಾತನಾಡಿ ರಾಜ್ಯಸರ್ಕಾರ ಟಿಪ್ಪುವಿನ ನೆನಪಿಗೆ ಮಾಡುವ ಕಾರ್ಯಗಳು ಸಾಕಷ್ಟಿವೆ. ಟಿಪ್ಪು ಕುಟುಂಬಕ್ಕೆ ನೀಡಿದ  ಭರವಸೆ ಈಡೇರಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕರುಗಳಾಧ ಶ್ರೀ ಎಂ.ಸತ್ಯನಾರಾಯಣ, ಶ್ರೀ ಮರಿತಿಬ್ಬೇಗೌಡ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
(ಛಾಯಾಚಿತ್ರ ಕಳುಹಿಸಿದೆ.)
ಟಿಪ್ಪು ಸುಲ್ತಾನ್” ಕುರಿತು ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನ
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಶಿಕ್ಷಕರ ಭವನದಲ್ಲಿ ೧೯-೦೧-೨೦೧೦ ರಿಂದ ೨೧-೦೧-೨೦೧೦ರ ತನಕ ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ೧೫೦ನೇ ವರ್ಷಾಚರಣೆ ಪ್ರಯುಕ್ತ ಟಿಪ್ಪುಸುಲ್ತಾನ್ ಕುರಿತ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.
ಈ ಪ್ರದರ್ಶನವನ್ನು ಜನವರಿ ೧೯ರಂದು ಬೆಳಿಗ್ಗೆ ೧೦-೩೦ಗಂಟೆಗೆ ದೇವನಹಳ್ಳಿ ಶಿಕ್ಷಕರ ಭವನದಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರು ಹಾಗೂ ಬೆಂಗಳುರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎನ್.ಬಚ್ಚೇಗೌಡ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳಾದ ಡಾ:ಬಿ.ಶೇಕ್‌ಆಲಿ ಮತ್ತು ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳಾದ ಡಾ:ಓ.ಅನಂತರಾಮಯ್ಯ ಅವರು ಆಗಮಿಸಲಿರುವರು.
ಅಧ್ಯಕ್ಷತೆಯನ್ನು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ.ವೆಂಕಟಸ್ವಾಮಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಕಾನೂನು ಸಚಿವರಾದ ಶ್ರೀ ಎಂ.ವೀರಪ್ಪಮೊಯಿಲಿ, ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ರಾಮಚಂದ್ರೇಗೌಡ ಶ್ರೀ ಮುಮ್ತಾಜ್ ಅಲಿಖಾನ್, ಸನ್ಮಾನ್ಯ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಎಂ.ಪಿ.ಜಯಕುಮಾರಿ ಸೊಣ್ಣಪ್ಪ ಮುಂತಾದವರು ಆಗಮಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಬಿ.ಆರ್.ಜಯರಾಮರಾಜೇಅರಸ್ ಹಾಗೂ ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕರಾದ ಉಷಾ ಸುರೇಶ್ ಅವರು ತಿಳಿಸಿದ್ದಾರೆ.
ಸಂಕ್ರಾಂತಿಯ ಸೊಗಡು ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆ
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಅರಣ್ಯ ಮತ್ತು ಪರಿಸರ ಇಲಾಖೆ ಇವರ ವತಿಯಿಂದ ಜನವರಿ ೧೭ರಂದು ಮಧ್ಯಾಹ್ನ ೩ ರಿಂದ ೫ ಗಂಟೆಯವರೆಗೆ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ’ ಸಂಕ್ರಾಂತಿ ಸೊಗಡು ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆ’ ಕುರಿತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಮಾನ್ಯ ಸಂಸದರಾದ ಅಡಗೂರು ವಿಶ್ವನಾಥ್ ಅವರು ವಹಿಸಲಿದ್ದಾರೆ.
ಉದ್ಘಾಟನೆಯನ್ನು ಸಿ.ಎಫ್.ಟಿ.ಆರ್.ಐ.ನ ನಿರ್ದೇಶಕರಾದ ಪದ್ಮಶ್ರೀ ಡಾ:ವಿ.ಪ್ರಕಾಶ್ ಅವರು ನೆರವೇರಿಸುವರು.
ಶ್ರೀ ಎಂ.ಎನ್.ಜಯಕುಮಾರ್, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಶ್ರೀ ಗೌರಯ್ಯ ಕರಕುಶಲ ಕಲೆಗಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಶ್ರೀ ಕೃಪಾಕರ ಸೇನಾನಿ ಇವರನ್ನು ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ ಸೇರಿದಂತೆ ಇನ್ನೂ ಅನೇಕ ಅಧಿಕಾರಿಗಳು ಹಾಗೂ ವಿವಿಧ ರಂಗಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಮೈಸೂರು ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಂತೆ ಮೈಸೂರು ಮೃಗಾಲಯದ ಒಂದು ಚಿರತೆ ಮರಿಯನ್ನು ಬೆಂಗಳೂರಿನ ಎತನ್ ಮಾರ್ಟಿನ್, ಗದಗ್‌ನ ಕು:ಸ್ಪೂರ್ತಿ ಹೊಂಬಾಳೆ ಒಂದು ನವಿಲು, ಮೈಸೂರಿನ ಎ.ಸಿ.ಶೇಖರ್ ಒಂದು ಲವ್‌ಬರ್ಡ್, ಜಿಯಸ್ ಬೈಯೊಟೆಕ್ ಲಿ. ಬೆಳಗೊಳ ಇಂಡಸ್ಟ್ರಿಯಲ್ ಮೈಸೂರು ಅವರು ಒಂದು ಫ್ಲೆಮಿಂಗೂ ಹಾಗೂ ಬೆಂಗಳೂರಿನ ಅಭಿಜಿತ್ ಆನಂದ್ ಮತ್ತು ದೇವರ್ದಿಮಿಲಿಂದ್ ಅವರು ಒಂದು ಕಾಕ್‌ಟೆಲ್ ದತ್ತು ಪಡೆದಿದ್ದಾರೆ.
ಜಿಲ್ಲೆಯಲ್ಲಿ ೩.೯೭ಲಕ್ಷ ಅಡುಗೆ ಅನಿಲ ಗ್ರಾಹಕರು
ಮೈಸೂರು, ಜ.೧೬ (ಕರ್ನಾಟಕ ವಾರ್ತೆ) – ಮೈಸೂರು ಜಿಲ್ಲೆಯಲ್ಲಿ ಒಟ್ಟು ೨೬ ಕಂಪನಿಗಳಿಂದ ೩,೯೭,೬೧೫ ಜನ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿದ್ದು, ಗ್ರಾಹಕರ ಅನುಕೂಲಕ್ಕಾಗಿ ಅನಿಲ ಸಿಲೆಂಡರ್‌ಗಳ ಲಭ್ಯತೆ ಮಾಹಿತಿಯನ್ನು ತಿತಿತಿ.mಥಿsoಡಿe.ಟಿiಛಿ.iಟಿ <hಣಣಠಿ://ತಿತಿತಿ.mಥಿsoಡಿe.ಟಿiಛಿ.iಟಿ> ಅಂತರಜಾಲದ ಮೂಲಕ ಪ್ರತಿದಿನ ಪ್ರಕಟಿಸಲಾಗುವುದೆಂದು ಅಪರ ಜಿಲ್ಲಾಧಿಕಾರಿ ಶ್ರೀ ಬೆಟ್‌ಸೂರಮಠ ಅವರು ಇಂದು ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಗೆ ತಿಳಿಸಿದರು.
ಗ್ಯಾಸ್ ಏಜೆನ್ಸಿಗಳವರು ಗ್ಯಾಸ್ ಸೇವೆ ಒದಗಿಸುವಲ್ಲಿ ಏನಾದರೂ ತೊಂದರೆ ಮಾಡಿದಲ್ಲಿ ಸಹಾಯವಾಣಿ ೧೦೭೭ ದೂರವಾಣಿ ಸಂಖ್ಯೆಗೆ ದೂರುಗಳನ್ನು ನೀಡುವಂತೆ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.
೫ ಕಿ.ಮೀ. ವ್ಯಾಪ್ತಿಯಲ್ಲಿ ಗ್ಯಾಸ್ ಸಂಪರ್ಕದಾರರಿಗೆ ಗ್ಯಾಸ್ ಸರಬರಾಜಿಗಾಗಿ ಯಾವುದೇ ಸರಬರಾಜು ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟ ಪಡಿಸಿದ ಅಪರ ಜಿಲ್ಲಾಧಿಕಾರಿಗಳು, ಅಡುಗೆ ಅನಿಲ ಗ್ರಾಹಕರು ಆಗಿಂದಾಗ್ಗೆ ತಮ್ಮ ಗ್ಯಾಸ್ ಟ್ಯೂಬ್, ಸ್ಟೌವ್ ಇತ್ಯಾದಿಗಳ ತಪಾಸಣೆಯನ್ನು ಸುರಕ್ಷತೆ ದೃಷ್ಠಿಯಿಂದ ಮಾಡಿಸಿಕೊಳ್ಳುವಂತೆ ಸೂಚಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರಾದ ಶ್ರೀ ಶಿವಣ್ಣ ಅವರು ಮಾತನಾಡಿ ಅಡುಗೆ ಅನಿಲ ನೂತನ ಸಂಪರ್ಕ ಪಡೆಯುವಾಗ ಗ್ರಾಹಕರಿಗೆ ಗ್ಯಾಸ್ ಸ್ಟೌವ್ ಖರೀದಿಸುವಂತೆ ಕಡ್ಡಾಯ ಮಾಡಬಾರದೆಂದು ಅನಿಲ ಕಂಪನಿಗಳ ಏಜೆನ್ಸಿಯವರಿಗೆ ತಿಳಿಸಿದ್ದಾರೆ. ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಅಡುಗೆ ಅನಿಲ ಸುರಕ್ಷತೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಏಪ್ರಿಲ್ ೨೦೦೯ ರಿಂದ ಇಲ್ಲಿಯವರೆಗೆ ೨೦೦ ದಾಳಿಗಳನ್ನು ಮಾಡಿ ೭೨ ಪ್ರಕರಣಗಳನ್ನು ದಾಖಲಿಸಿಕೊಂಡು ೨೭೮ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ೨೦೦೮-೦೯ನೇ ಸಾಲಿನಲ್ಲಿ ೨೯೩ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.
ಎರೆಹುಳು ಗೊಬ್ಬರ ಕೃಷಿಗೆ ಶ್ರೇಷ್ಟವಾದದು
ಕೋಲಾರ, ಜನವರಿ ೧೬ :                                              ನಂ : ೪೦-೮೯೩
ಬೇಸಾಯ ಪದ್ಧತಿಯಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಕೊಟ್ಟಿಗೆ  ಗೊಬ್ಬರದ ಕೊರತೆಯನ್ನು ನೀಗಿಸುವ ದೆಸೆಯಲ್ಲಿ ಎರೆಗೊಬ್ಬರವು ಒಂದು ಉತ್ತಮವಾದ ಸಾವಯವ ಗೊಬ್ಬರವಾಗಿದೆ.
ಎರೆಗೊಬ್ಬರವು ಸಸ್ಯ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಸಸ್ಯವರ್ಧಕಗಳನ್ನು ಸಹ ಒದಗಿಸುತ್ತದೆ.  ಎರೆಹುಳುಗೊಬ್ಬರದ ಉತ್ಪಾದನೆಯು ಬಹಳ ಸುಲಭ ಮತ್ತು ಕಡಿಮೆ ಖರ್ಚಿನದು.  ಸ್ಥಳೀಯವಾಗಿ ಎರೆಹುಳು ಗೊಬ್ಬರ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಮತ್ತು ಪ್ರೋತ್ಸಾಹಿಸಲು ಕಡಿಮೆ ವೆಚ್ಚದ ಒಂದು ಜೋಡಿ ಎರೆಹುಳು ತೊಟ್ಟಿಗಳ ಘಟಕ ಸ್ಥಾಪನೆಗೆ ತಗಲುವ ಶೇ.೫೦ ಭಾಗ ವೆಚ್ಚ ರೂ.೪೦೦೦/- ಕ್ಕೆ ಮೀರದಂತೆ ಸಹಾಯಧನ ನೀಡಲಾಗುತ್ತದೆ.
ಪ್ರತಿ ಸ್ವ-ಸಹಾಯ/ಸ್ತ್ರೀಶಕ್ತಿ ಗುಂಪಿಗೂ ಆದ್ಯತೆ ಇರುತ್ತದೆ.
ಎರೆಹುಳು ಗೊಬ್ಬರ ಉತ್ಪಾದನಾ ಘಟಕಗಳ ವಿನ್ಯಾಸ, ನಿರ್ದಿಷ್ಟತೆಗಳು ಇಲಾಖಾ ಮಾರ್ಗಸೂಚಿಯನ್ನು ಅನ್ವಯಿಸುವಂತಿರಬೇಕು.  ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.  ಸಾವಯವ ವಸ್ತುವನ್ನು ಮಣ್ಣಿಗೆ ಹೆಚ್ಚಿನ ರೀತಿಯಲ್ಲಿ ಸೇರಿಸಲು ಹಸಿರೆಲೆ ಗೊಬ್ಬರ(ಸೆಣಬು) ಬೀಜವನ್ನು ಇಲಾಖೆಯ ಸಹಾಯಧನದಲ್ಲಿ ಶೇ.೫೦ ರ ರಿಯಾಯಿತಿಯಲ್ಲಿ ಹೆಕ್ಟೇರ್‌ಗೆ ರೂ.೫೦೦/- ಗರಿಷ್ಟ ಮಿತಿ ಮೀರದಂತೆ ಅಥವಾ ಪ್ರತಿ ಕೆ.ಜಿ. ಬೀಜಕ್ಕೆ ೨೨.೫ ರೂ.ನಂತೆ ರೈತರಿಗೆ ವಿತರಿಸಲಾಗುವುದು.
ಕೋಲಾರ ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಾಗಿರುವುದರಿಂದ ನೀರಿನ ಮಿತ ಬಳಕೆಯಲ್ಲಿ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಚಿiಲ್ಲಿ ಕೃಷಿ ಇಲಾಖೆ ವತಿಯಿಂದ ಲಘು ನೀರಾವರಿ ಯೋಜನೆಯಡಿ  ತುಂತುರು ನೀರಾವರಿ ಘಟಕ ಉಪಕರಣಗಳಿಗೆ ಸಹಾಯಧನ ನೀಡಲಾಗುತ್ತಿದೆ.
ಆಸಕ್ತಿಯಿರುವ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.
ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸುವ ರೈತರು ಮೊದಲು ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಿ ನಂತರ ನಿಗದಿತ ನಮೂನೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಯೊಂದಿಗೆ ಪಹಣಿ, ಪರಿಶಿಷ್ಟ ಜಾತಿ/ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ, ನೀರಿನ ಲಭ್ಯತೆಯ ಪ್ರಮಾಣಪತ್ರ, ಸದರ ಘಟಕಕ್ಕೆ ಇತರೆ ಇಲಾಖೆಗಳಾದ ತೋಟಗಾರಿಕೆ/ರೇಷ್ಮೆ ಇಲಾಖೆಯಿಂದ ಸಹಾಯಧನ ಪಡೆದಿರುವುದಿಲ್ಲವೆಂಬ ದೃಢೀಕರಣ ಪತ್ರದ ದಾಖಲೆಗಳನ್ನು ಸಲ್ಲಿಸಬೇಕು.
ಸಂಬಂಧಪಟ್ಟ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ನಿರ್ದೇಶಕರು ಅರ್ಜಿ ಸಲ್ಲಿಸಿದ ರೈತರ ಸ್ಥಳ ಪರಿಶೀಲನೆ ಮಾಡಿದ ನಂತರ ಜೇಷ್ಠತಾನುಸಾರ ರೈತರ ವಂತಿಗೆಯನ್ನು ಡಿ.ಡಿ. ರೂಪದಲ್ಲಿ ಸಂಬಂಧಪಟ್ಟ ಸರಬರಾಜುದಾರರ/ಡೀಲರ್ ಹೆಸರಿನಲ್ಲಿ ಪಡೆದು ತುಂತುರು ನೀರಾವರಿ ಘಟಕಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಟಾನಗೊಳಿಸಲಾಗುತ್ತದೆ.
ಒಂದು ಹೆಕ್ಟೇರ್ ಪ್ರದೇಶಕ್ಕೆ ೧೫೦೦೦/- ರೂ.ಗಳ ಸಹಾಯಧನವನ್ನು ನೀಡಲಾಗುತ್ತದೆ.  ಉಳಿದ ಮೊತ್ತವನ್ನು ರೈತರು ಭರಿಸಬೇಕಾಗುತ್ತದೆ.
ಕೃಷಿ ಸಂಸ್ಕರಣೆ ಘಟಕಗಳನ್ನು ಪ್ರಾರಂಭಿಸಲು ಸಂಸ್ಕರಣೆಗೆ ಒಳಪಡುವ ಬೆಳೆಗಳ ವಿಸ್ತೀರ್ಣದ ಆಧಾರದ ಮೇಲೆ ರೈತರಿಗೆ/ಮಹಿಳಾ ಸ್ವ-ಸಹಾಯ ಗುಂಪುಗಳಿಗೆ/ಸರ್ಕಾರೇತರ ಸಂಸ್ಥೆಗಳಿಗೆ ಸಹಾಯಧನವನ್ನು ಶೇ.೫೦ ರಷ್ಟು ಗರಿಷ್ಠ ೬೫೦೦೦/- ರೂ.ಗಳು ಮ್ಭಿರದಂತೆ ಎಲ್ಲಾ ರೀತಿಯ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳು/ಮೌಲ್ಯವರ್ಧಿತ ವಸ್ತುಗಳನ್ನು ನೀಡಲಾಗುತ್ತದೆ.
ಆಸಕ್ತಿಯಿರುವ ರೈತರು ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರು, ಕೋಲಾರ ಇವರನ್ನು ಸಂಪರ್ಕಿಸಲು ಕೋರಿದೆ.
ಅರಿವು ಮೂಡಿಸುವ ಕಾರ್ಯಕ್ರಮ
ಕೋಲಾರ, ಜನವರಿ ೧೬ :                                              ನಂ : ೪೧-೮೯೪
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೋಲಾರ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ‘ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಅರಿವು ಮೂಡಿಸುವ ಕಾರ್ಯಕ್ರಮ’ ವನ್ನು ಜನವರಿ ೧೮ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಯಾದವ ಕಲ್ಯಾಣ ಮಂಟಪ, ಸೋಮೇಶ್ವರಪಾಳ್ಯ, ಮುಳಬಾಗಿಲು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಶಾಸಕ ಅಮರೇಶ್ ಕಾರ್ಯಕ್ರಮ ಉದ್ಘಾಟಿಸುವರು.  ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸರಸಮ್ಮ ಕೃಷ್ಣಪ್ಪ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶ್ಯಾಮಲಮ್ಮ ವೆಂಕಟೇಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸಾಮೇಗೌಡ, ಕೃಷ್ಣಪ್ಪ, ವಿಜಯಲಕ್ಷ್ಮಮ್ಮ, ಕೋಕಿಲಮ್ಮ, ಯಶೋಧಮ್ಮ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕೆ.ಇ.ತಿಮ್ಮಪ್ಪ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಪ್ರಬಂಧಕ ಜಯಪ್ರಕಾಶ್ ಸಾಮುದ್ರೆ ಭಾಗವಹಿಸುವರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶಾಲ್ಮಲಾ ಕರಕುಶಲ ಮಳಿಗೆ
ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ ೧೬ : ಹುಬ್ಬಳ್ಳಿಯ ವಿಮಾನ ನಿಲ್ದಾಣ ಆವರಣದಲ್ಲಿ ಧಾರವಾಡ ಜಿಲ್ಲಾ ಪಂಚಾಯತ , ನಬಾರ್ಡ್ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇವರುಗಳ ಸಹಯೋಗದಲ್ಲಿ ನಿರ್ಮಾಣಗೊಂಡ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ’ ಶಾಲ್ಮಲಾ ’ ಮಳಿಗೆಯನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಜಗದೀಶ ಶೆಟ್ಟರ ಇಂದಿಲ್ಲಿ ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕದ ಕರಕುಶಲ ನೈಪುಣ್ಯತೆಯನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಸ್ಥಳದಲ್ಲಿ ಪ್ರವಾಸಿ ಗ್ರಾಹಕರಿಗೆ ಪರಿಚಯಿಸುವ ಮತ್ತು ಅತ್ಯುತ್ತಮ ಗೃಹಾಲಂಕಾರ , ನಿತ್ಯೋಪಯೋಗಿ ಸ್ಥಳೀಯ ಉತ್ಪಾದಿತ ಕುಶಲ ವಸ್ತುಗಳಿಗೆ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ’ ಶಾಲ್ಮಲಾ ’ ಮಳಿಗೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದೆ . ಇದಕ್ಕೆ ಲಭಿಸುವ ಪ್ರತಿ ಕ್ರಿಯೆಯನ್ನು ಅವಲಂಬಿಸಿ ಇದರ ವಿಸ್ತರಣೆಗೂ ಅವಕಾಶ ಮುಕ್ತವಾಗಿದೆ ಎಂದರು . ಧಾರವಾಡ ಜಿಲ್ಲಾ ಪಂಚಾಯತ ಹೆಚ್ಚಿನ ಆಸಕ್ತಿ ವಹಿಸಿ ರಾಜ್ಯದಲ್ಲೇ ಪ್ರಥಮ ಎನ್ನುವ ಇಂತಹ ಒಂದು ಯತ್ನಕ್ಕೆ ಕೈ ಹಾಕಿದೆ .  ನಮ್ಮ ಸಂಸ್ಕೃತಿ , ಗ್ರಾಮೀಣ ಸೊಗಡನ್ನು ಇಂದಿನ ಪೀಳಿಗೆಗೂ ಹಾಗೂ ದೇಶಿ ವಿದೇಶಿ ಪ್ರವಾಸಿಗರಿಗೂ ಪರಿಚಯಸುವ ಈ ಮಳಿಗೆಯು ವಸ್ತುಗಳ ವೈಶಿಷ್ಟ್ಯತೆ ಪರಿಚಯಿಸುವ ಹಾಗೂ ನೇರ ಖರೀದಿಗೆ ಅವಕಾಶ ಕಲ್ಪಿಸುವ ವೇದಿಕೆ ಆಗಲಿದೆ  ಎಂದು ಶ್ರೀ ಜಗದೀಶ ಶೆಟ್ಟರ ಆಶಯ ವ್ಯಕ್ತಪಡಿಸಿದರು .
ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಿ. ಶಿಖಾ ಅವರು ಈ ಸಂದರ್ಭದಲ್ಲಿ ಮಾತನಾಡಿ ಸ್ವರ್ಣ ಜಯಂತಿ ಸ್ವರೋಜಗಾರ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ೪೦ ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಸ್ವತ್ತಿನ ನಿರ್ಮಾಣ ಕೈಕೊಳ್ಳಲಾಗಿದೆ . ಅದರಲ್ಲಿ ’ ಶಾಲ್ಮಲಾ ’ ಮಳಿಗೆ ಕೂಡಾ ಒಂದಾಗಿದ್ದು ಇದಕ್ಕೆ ೫.೮೩ ಲಕ್ಷ ರೂ. ವೆಚ್ಚವಾಗಿದೆ . ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಅತ್ಯಂತ ಕಡಿಮೆ ದರದಲ್ಲಿ ವಾರ್ಷಿಕ ಬಾಡಿಗೆ ಆಕರಿಸಿ ಇದಕ್ಕಾಗಿ ಜಾಗೆಯನ್ನು ನೀಡಿದೆ . ನಬಾರ್ಡ್ ಸಂಸ್ಥೆ ಒಂದು ವರ್ಷದ ಮಳಿಗೆ ಆವರ್ತಕ ವೆಚ್ಚ ವಹಿಸಲು ಒಪ್ಪಿಕೊಂಡಿದೆ . ಜಿಲ್ಲಾ ಕೈಗಾರಿಕಾ ಉತ್ಪಾದಕ ಸರಬರಾಜು ಮತ್ತು ಮಾರಾಟ ಸಹಕಾರಿ ಸಂಘ ಮಳಿಗೆಯನ್ನು ನಡೆಯಿಸುವ ಹೊಣೆ ಹೊತ್ತಿದೆ ಎಂದು ತಿಳಿಸಿದರು . ಸಂಪೂರ್ಣವಾಗಿ ಧಾರವಾಡ ಜಿಲ್ಲಾ ಪಂಚಾಯತನ ಕನಸಿನ ಕೂಸಾಗಿರುವ ಈ ಮಳಿಗೆಯಲ್ಲಿ ಧಾರವಾಡ , ಗದಗ , ಬೆಳಗಾವಿ , ಬಾಗಲಕೋಟೆ , ಬೀದರ ಹಾಗೂ ಕಾರವಾರ ಜಿಲ್ಲೆಗಳಲ್ಲಿನ ದೇಶಿ ವಸ್ತುಗಳು ಇಲ್ಲಿ ಮಾರಾಟಕಿದ್ದು ಕೆಲವು ಉತ್ಪನ್ನಗಳು ವಿದೇಶಿಗಳಲ್ಲಿ ಈಗಾಗಲೇ ಜನಪ್ರಿಯವಾಗಿರುವ ಕುರಿತು ಅವರು ಉಲ್ಲೇಖಿಸಿದರು .
ಸಮಾರಂಭದಲ್ಲಿ   ಧಾರವಾಡ    ಜಿಲ್ಲಾ   ಪಂಚಾಯತ   ಅಧ್ಯಕ್ಷೆ   ಶ್ರೀಮತಿ  ಸಾವಿತ್ರಮ್ಮ   ಭಗವತಿ   ಉಪಾಧ್ಯಕ್ಷ ಶ್ರೀ ಎಸ್. ಐ. ಚಿಕ್ಕಣ್ಣವರ , ಜಿಲ್ಲಾ ಪಂಚಾಯತ ಸದಸ್ಯರು , ಜಿಲ್ಲಾ ಪಂಚಾಯತ ಅಧಿಕಾರಿಗಳು ಹುಬ್ಬಳ್ಳಿ ಹ್ಯಾಂಡಿಕ್ಯಾಪ್ಡ ಹಾಸ್ಪಿಟಲ್‌ನ ನಿರ್ದೇಶಕರು , ಇಕ್ವಿಪ್ ಇಂಡಿಯಾ ಸೆಂಟರಿನ ಅಧಿಕಾರಿಗಳು ಉಪಸ್ಥಿತರಿದ್ದರು .
ಮಳಿಗೆ  ಉದ್ಘಾಟನೆ  ನಂತರ  ರಾಜ್ಯದ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯ ,   ಶಾಸಕರುಗಳಾದ  ಶ್ರೀ ಸಂತೋಷ ಲಾಡ್ ,  ಹಾಗೂ  ರಾಜ್ಯ  ನೆರೆ  ಸಂತ್ರಸ್ತರ  ಪುನರ್ವಸತಿ  ವ್ಯವಹಾರಗಳ  ಆಯುಕ್ತ ಶ್ರೀ ಜಾಮದಾರ ಅವರುಗಳು ಮಳಿಗೆಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು .
ಸಂಚಾರಕ್ಕೆ ಹೆಚ್ಚುವರಿ ಸುವರ್ಣ ಸಾರಿಗೆ ವಾಹನಗಳು

ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ ೧೬ : ಸಾರ್ವಜನಿಕ ಪ್ರಯಾಣಿಕರಿಗೆ ತೃಪ್ತಿಕರ ಸಾರಿಗೆ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ ವಿಭಾಗದ ಕಾರ್ಯಾಚರಣೆ ವ್ಯಾಪ್ತಿಗೆ ನೂತನ ೧೩  ಸುವರ್ಣ ಸಾರಿಗೆ  ಬಸ್ಸುಗಳನ್ನು ಹುಬ್ಬಳ್ಳಿ ವಿಜಾಪೂರ ಮತ್ತು ಹುಬ್ಬಳ್ಳಿ – ಇಡಗುಂಜಿ ಮಾರ್ಗದ ಮದ್ಯೆ ಸಾರಿಗೆ ನಡೆಸುವ ಎರಡು ನೂತನ   ವಾಯುವ್ಯ ಸಾರಿಗೆ  ವಾಹನಗಳ ಸೌಲಭ್ಯ ಪ್ರಾರಂಭಿಸಿದೆ . ಈ ವಾಹನಗಳ ಸಂಚಾರ ಕಾರ್ಯಕ್ರಮಕ್ಕೆ ಇಂದು ದಿ. ೧೬ ರಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಜಗದೀಶ ಶೆಟ್ಟರ ಅವರು ಚಾಲನೆ ನೀಡಿದರು .  ಈ ಸಂದರ್ಭದಲ್ಲಿ  ಸಂಸದರಾದ  ಶ್ರೀ ಪ್ರಲ್ಹಾದ ಜೋಶಿ ,  ಶಾಸಕರುಗಳಾದ ಶ್ರೀ ವೀರಭದ್ರಪ್ಪ ಹಾಲಹರವಿ , ಶ್ರೀ ಮೋಹನ ಲಿಂಬಿಕಾಯಿ ,   ಸಾರಿಗೆ  ಸಂಸ್ಥೆ  ಅಧ್ಯಕ್ಷ  ಶ್ರೀ ಮಲ್ಲಿಕಾರ್ಜುನ ಸಾವಕಾರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎ. ಎನ್. ಪಾಟೀಲ ಅವರು ಉಪಸ್ಥಿತರಿದ್ದರು .

ದಿನಾಂಕ. ೧೮ ರಂದು ನಗರಾಭಿವೃದ್ಧಿ ನೀತಿ ಕುರಿತು ಕಾರ್ಯಾಗಾರ
ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ ೧೬ : ಸೋಮವಾರ ದಿನಾಂಕ. ೧೮ ಮುಂಜಾನೆ ೧೦ ಗಂಟೆಗೆ ಬಿವಿಬಿ ಇಂಜನೀಯರಿಂಗ್ ಕಾಲೇಜಿನ ಬಯೋಟೆಕ್ ಅಡಿಟೋರಿಯರದಲ್ಲಿ ನಗರಾಭಿವೃದ್ಧಿ ನೀತಿಯ ಕುರಿತಂತೆ ಕಾರ್ಯಾಗಾರ ಜರುಗಲಿದೆ . ಕಾಯಾಗಾರದ ಅಧ್ಯಕ್ಷತೆಯನ್ನು ರಾಜ್ಯದ ನಗರಾಭಿವೃದ್ಧಿ ಸಚಿವರಾದ ಶ್ರೀ ಸುರೇಶ ಕುಮಾರ ವಹಿಸಲಿದ್ದು ಮುಖ್ಯಮಂತ್ರಿಗಳ ನಗರ ವಿಷಯಗಳ ಸಲಹೆಗಾರ ಡಾ|| ಎ. ರವೀಂದ್ರ ನಗರಾಭಿವೃದ್ಧಿ ನೀತಿ ಕುರಿತು ಪ್ರಾತ್ಯಕ್ಷಿತೆ ನೀಡುವರು .

ಉದ್ಯೋಗ ಖಾತ್ರಿ ಕೂಲಿ ಹೆಚ್ಚಳ
ಬೀದರ, ಜ.೧೬: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಟ ಕೂಲಿ ದರವನ್ನು ನೂರು ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಿಳಿಸಿದ್ದಾರೆ.
೨೦೦೯ರ ಎಪ್ರಿಲ್‌ನಿಂದ ಅನ್ವಯವಾಗುವಂತೆ ಕನಿಷ್ಟ ಕೂಲಿ ದರವನ್ನು ಹೆಚ್ಚಿಸಲಾಗಿದೆ. ಆದರೆ ೨೦೦೯ರ ಡಿಸೆಂಬರ್ ೩೧ರ ವರೆಗೆ ಅನುಷ್ಟಾನಗೊಳಿಸಲಾದ ಎಲ್ಲಾ ಕಾಮಗಾರಿಗಳ ಸಂಬಂಧ ಕನಿಷ್ಟ ಕೂಲಿ ದರವನ್ನು ರೂ. ೮೨ಅನ್ವಯಿಸಿ ಅನುಷ್ಟಾನಗೊಳಿಸಲಾಗುವುದು. ಹಾಗೂ ಸದರಿ ಕೂಲಿ ದರವನ್ನು ಪಾವತಿಸಲಾಗುವುದು.
ಎಪ್ರಿಲ್ ೨೦೦೯ರಿಂದ ಡಿಸೆಂಬರ್ ೩೧ರವರೆಗೆ ಕೆಲಸ ನಿರ್ವಹಿಸಿರುವ ಎಲ್ಲಾ ನೊಂದಾಯಿತ ಕೂಲಿ ಕಾರ್ಮಿಕರಿಗೆ ನಿರ್ವಹಿಸುವ ಕೆಲಸಕ್ಕೆ ಅನುಗುಣವಾಗಿ ಪರಿಷ್ಕೃತ ಕನಿಷ್ಟ ಕೂಲಿ ದರದಲ್ಲಿನ ವ್ಯತ್ಯಾಸದ ಬಾಕಿ ಮೊತ್ತವನ್ನು ಸರ್ಕಾರದ ನಿರ್ದೇಶನ ಬಂದ ಬಳಿಕ ಪ್ರತ್ಯೇಕವಾಗಿ ಪಾವತಿಸಲಾಗುವುದು. ೨೦೧೦ರ ಜನವರಿ ೧ರಿಂದ ಪ್ರಾರಂಭವಾಗುವ ಎಲ್ಲಾ ಕಾಮಗಾರಿಗಳಿಗೆ ಅನ್ವಯವಾಗುವಂತೆ ಅಂದಾಜು ಪಟ್ಟಿಗಳನ್ನು ತಯಾರಿಸಿ ಅನುಷ್ಟಾನಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಮುದ್ರೋತ್ಪನ್ನ ರಫ್ತಿಗೆ ಕ್ಯಾಚ್ ಸರ್ಟಿಫಿಕೆಟ್
ಮಂಗಳೂರು ಜನವರಿ ೧೨: (ಕರ್ನಾಟಕ ವಾರ್ತೆ)-ಕಾನೂನು ಬಾಹಿರ, ಬೇನಾಮಿ ಮತ್ತು ಅನಿರ್ಬಂಧಿತ ಮೀನುಗಾರಿಕೆ ತಡೆಗೆ ಮತ್ತು ಹಿಡಿದ ಮೀನಿಗೆ ನ್ಯಾಯಯುತ ಬೆಲೆ ದೊರಕಿಸಲು ಯರೋಪಿಯನ್ ಯೂನಿಯನ್  ಕ್ಯಾಚ್ ಸರ್ಟಿಫಿಕೆಟ್ ಸ್ಥಿರೀಕರಣ ವ್ಯವಸ್ಥೆಯ ಜಾರಿಗೆ ನಿರ್ಧರಿಸಿದೆ.
ಈ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲಾ ಮೀನುಗಾರಿಕೆ ಬೋಟ್ ಗಳ ಮಾಲೀಕರ ಮತ್ತು ಸಾಗರೋತ್ಪನ್ನ ರಫ್ತುದಾರರ ಸಹಕಾರವನ್ನು ಕೋರಿರುವ ಎಫ್ ಎ ಒ ಮತ್ತು ಇಂಡಿಯನ್ ಒಸಿಯನ್ ಟ್ಯೂನಾ ಕಮಿಷನ್ ನಂತಹ ಪ್ರಾಂತೀಯ ಮೀನುಗಾರಿಕಾ ನಿರ್ವಹಣಾ ಸಂಘಟನೆಗಳು ಈ ವ್ಯವಸ್ಥೆಗೆ ಮುಂದಾಗಿದೆ.
ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುವ ಮೀನು,ಸಿಗಡಿ,ಕಟಲ್ ಫಿಶ್ ಮುಂತಾದವುಗಳು ನ್ಯಾಯ ಸಮ್ಮತ (ಸ್ಥಿರೀಕರಿಸಿದ)ಕ್ಯಾಚ್ ಸರ್ಟಿಫಿಕೇಟ್ ಗಳನ್ನು ಹೊಂದಿರುವ ಅವಶ್ಯಕತೆ ಬಗ್ಗೆ ಯುರೋಪಿಯನ್ ಕಮಿಷನ್ ಹೊಸ ನಿಯಮ ಹೊರತಂದಿದೆ. ಮೀನುಗಾರಿಕೆ ನಡೆಸಿದ ಪ್ರದೇಶ ಮತ್ತು ಬಂದರಿಗೆ ತಲುಪಿದ ಬಗ್ಗೆ ತಿಳಿದುಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಿದೆ.
೨೦೧೦ನೇ ಇಸವಿಯ ಜನವರಿ ೧ ಮತ್ತು ನಂತರ ಸಮುದ್ರದಿಂದ ಹಿಡಿದು ರಫ್ತು ಮಾಡುವ ಸರಕುಗಳಿಗೆ ಅನ್ವಯವಾಗುತ್ತದೆ. ನೇರವಾಗಿ ಅಥವಾ ಅನ್ಯದೇಶದ ಮೂಲಕ ರಫ್ತು ಮಾಡುವ ಸರಕುಗಳೀಗೆ ಈ ನಿಯಮ ಲಾಗು ಆಗುತ್ತದೆ. ಸಮುದ್ರೋತ್ಪನ್ನವನ್ನು ರಫ್ತು ಮಾಡುವ ಎಲ್ಲ ದೇಶಗಳು ಈ ಅಗತ್ಯತೆಯನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡಿರುತ್ತವೆ ಮತ್ತು ಈ ಬಗ್ಗೆ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ತಿಳಿಸಿರುತ್ತವೆ.
ಉದ್ದಿಮೆಯಿಂದ (ಬೋಟ್ ಮಾಲಿಕರು ಅಥವಾ ರಫ್ತುದಾರರು) ನೀಡಲ್ಪಡುವ ಕ್ಯಾಚ್ ಸರ್ಟಿಫಿಕೇಟ್ ಗಳು ಸರಕಾರಿ ಪ್ರಾಧಿಕಾರದಿಂದ ಸ್ಥಿರೀಕರಿಸಿ ಮೇಲು ರುಜು ಹೊಂದಿರಬೇಕು. ರಫ್ತು ಮಾಡುವ ರಾಷ್ಟ್ರಗಳು,ಕೆಲವು ವಿಷಯಗಳ ಬಗ್ಗೆ ಆಳವಾಗಿ ಎಚ್ಚರಿಕೆ ವಹಿಸುವ ಬಗ್ಗೆ ಅಗತ್ಯ ಇರುತ್ತದೆ.
ಪ್ರತಿ ವರ್ಷ ೨೮೦೦ ಕೋಟಿ ರೂ. ಬೆಲೆಯ ಸಾಗರೋತ್ಪನ್ನಗಳು ಭಾರತದಿಂದ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಯುರೋಪ್ ಒಕ್ಕೂಟ ರಾಷ್ಟ್ರಗಳ ಮಾರುಕಟ್ಟೆ ಪ್ರಾಮ್ಯುಖತೆಯನ್ನು ಪರಿಗಣಿಸಿ ಕ್ಯಾಚ್ ಸರ್ಟಿಫಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಭಾರತ ಸರ್ಕಾರ, ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡಿದೆ.
ಎಂಪಿಡಾ (ಮೆರೈನ್ ಪ್ರೊಡಕ್ಟ್ ಎಕ್ಸಪೋರ್ಟ್ ಡೆವಲಪಮೆಂಟ್ ಅಥಾರಿಟಿ) ಈಗಾಗಲೇ ಬೋಟ್ ಗಳ ಮೂಲಕ ನೇರವಾಗಿ ಅಥವಾ ಮಧ್ಯವರ್ತಿಗಳ ಮೂಲಕ ರಫ್ತುದಾರರಿಗೆ ತಲುಪುವ ಹಿಡುವಳಿಯ ನಿಗಾ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ಸ್ಥಿರೀಕರಣ ಕಾರ್ಯ ಆರಂಭಿಸಿದೆ. ಮೊದಲ ಹಂತವಾಗಿ ಬೋಟ್ ಗಳಿಗೆ ಲಾಗ್ ಬುಕ್ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ನಮೂನೆಯನ್ನು ಪುಕ್ಕಟೆಯಾಗಿ ಒದಗಿಸಲು ನಿಶ್ಚಯಿಸಿದೆ. ಹಿಡುವಳಿಯನ್ನು ನಮೂದಿಸುವ ಕ್ಯಾಚ್ ಸರ್ಟಿಫಿಕೆಟ್ ಗಳನ್ನು ವೇಗವಾಗಿ ಸ್ಥಿರೀಕರಿಸುವ ನಿಟ್ಟಿನಲ್ಲಿ ಗಣಕೀಕರಣದ ವ್ಯವಸ್ಥೆಯನ್ನು ಮಾಡಿವೆ.
ವ್ಯವಸ್ಥೆಯ ಅನುಷ್ಠಾನಕ್ಕೆ ಎಲ್ಲ ಬೋಟ್ ಮಾಲೀಕರ ಸಹಕಾರವನ್ನು ಎಂಪಿಡಾ ಬಯಸಿದ್ದು, ಈ ಸಂಬಂಧ ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ  ೧೮೦೦-೪೨೫-೧೫೧೫, ೧೮೦೦-೪೨೫-೧೬೭೬, ೧೮೦೦-೪೨೫-೦೧೬೦ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಥಳ ಪರಿಶೀಲನೆ
ಮಡಿಕೇರಿ ಜ.೧೬ (ಕರ್ನಾಟಕ ವಾರ್ತೆ):- ನಗರದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಗತ್ಯ ಜಾಗಕ್ಕಾಗಿ ವಿಧಾನಸಭಾಧ್ಯಕ್ಷರಾದ  ಕೆ.ಜಿ.ಬೋಪಯ್ಯ ಮತ್ತು ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚುರಂಜನ್ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಸುದರ್ಶನ ಅತಿಥಿ ಗೃಹಕ್ಕೆ ಹೊಂದಿಕೊಂಡಿರುವ ಇತ್ತೀಚೆಗೆ ಖಾಸಗಿ ಒತ್ತುವರಿದಾರರಿಂದ ತೆರವುಗೊಳಿಸಿದ ೧ ಎಕರೆ ಸರ್ಕಾರಿ ಜಾಗದ ಒಂದು ಭಾಗವನ್ನು  ಲೋಕೋಪಯೋಗಿ  ಇಲಾಖೆಯ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿರಿಸಿ ಉಳಿದ ಜಾಗವನ್ನು ಸಂಪೂರ್ಣವಾಗಿ ನಗರಸಭೆಗೆ ಪಾರ್ಕ್ ನಿರ್ಮಾಣಕ್ಕೆ ಮೀಸಲಿರಿಸಲು ಕೆ.ಜಿ. ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರು ಅಪರ ಜಿಲ್ಲಾಧಿಕಾರಿ ಚಂದ್ರೇಗೌಡ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.
ನಗರಸಭೆಯ ಎನ್. ಎಫ್. ಸಿ ಅನುದಾನದ ೧ ಕೋಟಿ ರೂ.ಗಳನ್ನು ಈ ಜಾಗದಲ್ಲಿ ಅತ್ಯುತ್ತಮವಾದ ಪಾರ್ಕ್ ನಿರ್ಮಾಣಕ್ಕೆ ಮೀಸಲಿರಿಸುವಂತೆ ಹಾಗೂ ಇದರಲ್ಲಿ ಇರುವ ಮರಗಿಡಗಳನ್ನು ಕಡಿಯದೆ ಮತ್ತು ನೀರಿನ ಝರಿಗಳಿಗೆ ಯಾವುದೇ ದಕ್ಕೆಯಾಗದಂತೆ ಉತ್ತಮವಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ನಗರಸಭೆ ಪೌರಾಯುಕ್ತರಾದ ಶ್ರೀಕಾಂತ್ ರಾವ್ ಅವರಿಗೆ ನಿರ್ದೇಶನ ನೀಡಿದರು.
ಇದೇ ಜಾಗದ ಪಕ್ಕದಲ್ಲಿರುವ ಅರಣ್ಯ ಇಲಾಖೆ ಸೌದೆ ಡಿಪೋ ನಡೆಸುತ್ತಿರುವ ಜಾಗವು ಸರ್ಕಾರಿ ಪೈಸಾರಿಯಾಗಿದ್ದು, ಡಿಪೋವನ್ನು ಬೇರೆಡೆಗೆ ಸ್ಥಳಾಂತರಿಸಿ ಈ ಸ್ಥಳವನ್ನು ಸುವರ್ಣ ಕನ್ನಡ ಸಮುಚ್ಚಯ ಭವನ ನಿರ್ಮಾಣಕ್ಕೆ ಕಾಯ್ದಿರಿಸುವಂತೆ  ವಿಧಾನ ಸಭಾಧ್ಯಕ್ಷರು ಹಾಗೂ ಶಾಸಕರು ಕಂದಾಯ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು. ಈ ಜಾಗವನ್ನು ಶೀಘ್ರವೇ ಖಾಲಿ ಮಾಡಿಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಇದಕ್ಕೆ ಮುನ್ನ ಸೆಂಟ್ರಲ್ ವರ್ಕ್ ಶಾಪ್ ಪ್ರದೇಶದಲ್ಲಿ ಸುಮಾರು ಎರಡು ಎಕರೆ ಸರ್ಕಾರಿ ಜಾಗವಿದ್ದು ಇದರಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಸೂಚನೆ, ಸಲಹೆ ನೀಡಿದ ಅವರು ಈ ಪ್ರದೇಶದಲ್ಲಿರುವ ಗಿಡಗಂಟೆಗಳನ್ನು ತೆಗೆದು ಸಂಪೂರ್ಣ ಸರ್ವೆ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.
ಈ ಸ್ಥಳಗಳನ್ನು ಸರ್ಕಾರಿ ಬಳಕೆಗೆ ಕಾಯ್ದಿರಿಸುವ ಜೊತೆಗೆ ಶೀಘ್ರವೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು. ನಂತರ ಸುದರ್ಶನ  ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇದ ಜಾರಿ, ಸುಂಟಿ ಕೊಪ್ಪ ಗ್ರಾಮ ಪಂಚಾಯ್ತಿ ಕಸವಿಲೇವಾರಿಗೆ ಜಾಗ ನಿಗಧಿಯಾಗಿರುವ ಬಗ್ಗೆ ಚರ್ಚೆ ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನುಮುತ್ತಪ್ಪ ಅಪರ ಜಿಲ್ಲಾಧಿಕಾರಿ ಚಂದ್ರೇಗೌಡ, ಉಪವಿಭಾಗಾಧಿಕಾರಿ ಶಿವಶಂಕರ್, ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಬಸವರಾಜಪ್ಪ, ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಕೇಶವಮೂರ್ತಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ  ಸತ್ಯನಾರಾಯಣ್, ಪೌರಾಯುಕ್ತರಾದ  ಶ್ರೀಕಾಂತ್‌ರಾವ್, ಎ.ಸಿ.ಎಫ್. ಲಕ್ಷ್ಮಣ್ ಮತ್ತಿತರರು ಹಾಜರಿದ್ದರು.
ಜನವರಿ ೨೭ ರಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ
ಮಡಿಕೇರಿ ಜ.೧೬ (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯು ಜ. ೨೭ ರಂದು ಪೂರ್ವಾಹ್ನ  ೧೧.೦೦ ಗಂಟೆಗೆ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ  ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ವಿ.ಎಂ. ವಿಜಯ ಅವರ ಅಧ್ಯಕ್ಷ್ಷತೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೋಲಿಯೋ ಯಶಸ್ಸು: ಜಿಲ್ಲಾಧಿಕಾರಿಗಳ ಅಭಿನಂದನೆ

ವಿಜಾಪುರ, ಜನೇವರಿ ೧೬:  ಜಿಲ್ಲೆಯಾದ್ಯಂತ ಜನೇವರಿ ೧೦ ರಿಂದ ೧೩ ರವರೆಗೆ  ಜರುಗಿದ ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ  ಶೇ ೯೯,೨ ರಷ್ಟು ಸಾಧನೆ ಮಾಡಲು ಕಾರಣರಾದ  ಎಲ್ಲರಿಗೂ ಜಿಲ್ಲಾಡಳಿತ ಅಭಿನಂದಿಸಿದೆ.
ಜನೇವರಿ ೧೦ ರಿಂದ ೧೩ರ ವರೆಗೆ ವಿಜಾಪುರ ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ ಯಶಸ್ವಿಯಾಗಿದೆ.  ಒಂದು ದಿನ ಲಸಿಕಾ ಕೇಂದ್ರದಲ್ಲಿ ಹಾಗೂ ಮೂರು ದಿಸ ಮನೆಮನೆಗೆ ಭೇಟಿ ನೀಡಿ ಐದು ವರ್ಷದೊಳಗಿನ ೩೧೨೭೮೦ಮಕ್ಕಳಿಗೆ ಲಸಿಕೆ ಹಾಕಿ ೯೯.೨ ಪ್ರತಿಶತ ಸಾಧನೆಯಾಗಿದೆ.  ಮನೆ ಮನೆ ತಂಡದ ಕಾರ್ಯಕರ್ತರು ಪ್ರತಿಶತ ೧೦೦.೭೭ ರಷ್ಟು ಮನೆ  ಮನೆಗೆ ಭೇಟಿಯ ಸಾಧನೆಯಾಗಿದ್ದು,  ಗ್ರಾಮೀಣ ಪ್ರದೇಶದಿಂದ  ಬಡ ಜನರು ದುಡಿಯಲು ಬೇರೆ ಸ್ಥಳಗಳಿಗೆ ಸ್ಥಳಾಂತರ ಹೊಂದಿರುವುದು ಕಂಡುಬಂದಿದೆ.  ಆಸಕ್ತಿ , ಉತ್ಸಾಹದಿಂದ ದೂರದೂರದ ಮನೆಗಳಿಗೆ ಕಾರ್ಯಕರ್ತರು ಭೇಟಿ ನೀಡಿ, ಲಸಿಕೆ ಹಾಕುವುದು ಕಷ್ಟವೆನಿಸಿದರೂ  ನಿಗದಿತ ಗುರಿ ಸಾಧಿಸಿದ್ದಾರೆ.  ಸಾಧನೆಗೆ ಸಹಕರಿಸಿದ ಸಾರ್ವಜನಿಕರಿಗೆ, ಸ್ವಯಂ ಸೇವಾ ಸಂಘದವರಿಗೆ, ಪ್ರಚಾರ ಮಾಧ್ಯದವರಿಗೆ, ಜನಪ್ರತಿನಿಧಿಗಳಿಗೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಶಿಕ್ಷಣ ಇಲಾಖೆ, ಹೆಸ್ಕಾಂ ಇಲಾಖೆ, ಕೆಎಸ್‌ಆರ್‌ಟಿಸಿ, ಆಯ್.ಎಂ.ಎ., ಆಯ್.ಎ.ಪಿ. ಜಿಲ್ಲೆಯ ಎಲ್ಲ ಆದಳಿತ ವರ್ಗದವರಿಗೆ ಪರೋಕ್ಷ ಮತ್ತು ಅಪರೋಕ್ಷವಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ಜಿಲ್ಲಾಧಿಕಾರಿಗಳಾದ ಆರ್. ಶಾಂತರಾಜ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಪ್ರವಾಸ
ಮಂಗಳೂರು ಜನವರಿ ೧೬:(ಕರ್ನಾಟಕ ವಾರ್ತೆ)-ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಡಾ. ಮುಮ್ತಾಜ್  ಆಲಿಖಾನ್‌ರವರು ದಿನಾಂಕ ೧೭-೧-೧೦ ರಂದು ಪೂ. ೮.೧೫ ಕ್ಕೆ ಬಜ್ಪೆ ವಿಮಾಣ ನಿಲ್ದಾಣಕ್ಕೆ ಆಗಮಿಸಿ, ಉಡುಪಿಗೆ ತೆರಳುವರು.ಉಡುಪಿಯ ಸಮಾರಂಭದಲ್ಲಿ ಭಾಗವಹಿಸಿ ,ವಾಸ್ತವ್ಯ ಮಾಡುವರು. ೧೮-೧-೧೦ ರಂದು ಉಡುಪಿಯಿಂದ ಸುಳ್ಯಕ್ಕೆ ಆಗಮಿಸಿ, ಸುಳ್ಯದ ಅರಂತೋಡಿನಲ್ಲಿ ತೆಕ್ಕಿಲ್ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ವತಿಯಿಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರಿಗೆ ನಡೆಯಲಿರುವ ಸನ್ಮಾನ ಕಾರ್‍ಯಕ್ರಮದಲ್ಲಿ ಭಾಗವಹಿಸುವರು.ನಂತರ ಅಪರಾಹ್ನ ೭ ಗಂಟೆಗೆ  ಬಜ್ಪೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವರು.
ಕೇಂದ್ರ ಸಹಾಯಕ ಪೆಟ್ರೋಲಿಯಂ ಸಚಿವರ ಪ್ರವಾಸ
ಮಂಗಳೂರು ಜನವರಿ ೧೬: (ಕರ್ನಾಟಕ ವಾರ್ತೆ)-ಕೇಂದ್ರ ಸಹಾಯಕ ಪೆಟ್ರೋಲಿಯಂಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಜಿತಿನ್ ಪ್ರಸಾದ್ ರವರು ದಿನಾಂಕ ೧೭-೧-೧೦ ರಂದು ರಾತ್ರಿ  ೧೦ ಗಂಟೆಗೆವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ೧೦.೧೫ಕ್ಕೆ ಎಂಆರ್‌ಪಿಎಲ್‌ಗೆ ತೆರಳಿ ವಾಸ್ತವ್ಯ ಮಾಡುವರು . ೧೮ ರಂದು  ಉಡುಪಿಗೆ ತೆರಳಿ, ಸಮಾರಂಭದಲ್ಲಿ ಭಾಗವಹಿಸಿ, ಬಳಿಕ ೯.೪೫ ಕ್ಕೆ  ಎಂಆರ್‌ಪಿಎಲ್‌ನ ೨ನೇವಿಭಾಗದ  ೩ನೇಫೇಸ್‌ಗೆ ಶಿಲಾನ್ಯಾಸ ನೆರವೇರಿಸುವರು. ನಂತರ ಸಂಜೆ ೩.೩೦ ಕ್ಕೆ ಮುಂಬಯಿಗೆ ವಿಮಾನದ ಮೂಲಕ ತೆರಳುವರು .
ಜನವರಿ ೧೮ರಂದು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ
ಬೀದರ.೧೬:-ಪ್ರಕೃತಿ ವಿಕೋಪ, ವಿಪತ್ತುಗಳು  ಸಂಭವಿಸಿದಾಗ ಆಪತ್ತಿಗೆ ಸಿಲುಕಿಕೊಂಡಿರುವ  ಜನರನ್ನು ರಕ್ಷಿಸುವ ಕಾರ್ಯದಲ್ಲಿ ಗೃಹರಕ್ಷಕರು  ನಿರ್ವಹಿಸುವ ಪಾತ್ರದ ಕುರಿತು ಜನವರಿ  ೧೮ ರಂದು  ಬೆಳಿಗ್ಗೆ ೧೧ ಗಂಟೆ ಸುಮಾರಿಗೆ  ನೆಹರು ಕ್ರೀಡಾಂಗಣದ ಬಳಿ ಇರುವ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ  ಅಣಕು ಪ್ರದರ್ಶನ ಏರ್ಪಡಿಸಲಾಗಿದೆ ಎಂದು  ಗೃಹರಕ್ಷಕ ಜಿಲ್ಲಾ ಸಮಾದೇಷ್ಠರು ಹಾಗೂ ಜಿಲ್ಲಾ  ಹೆಚ್ಚುವರಿ ಪೋಲಿಸ್ ವರೀಷ್ಠಾಧಿಕಾರಿಗಳಾದ ಅಶೋಕ ಆರ್. ಅಣ್ವೇಕರ್ ಅವರು  ತಿಳಿಸಿದರು.
ಅವರು ಶನಿವಾರ ತಮ್ಮ ಕಛೇರಿಯಲ್ಲಿ  ಸುದ್ದಿಗಾರರೊಂದಿಗೆ  ಮಾತನಾಡುತ್ತ ಅಂದು ಬೆಳಿಗ್ಗೆ ೮ ಕ್ಕೆ  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಯಿಂದ  ಹೊರಡುವ ರ್‍ಯಾಲಿಯು ಚೌಬಾರ, ಬಸವೇಶ್ವರ  ವೃತ್ತ, ಅಂಬೇಡ್ಕರ್ ವೃತ್ತದ  ಮುಖಾಂತರವಾಗಿ ಆದರ್ಶ ಶಿಕ್ಷಣ ಸಂಸ್ಥೆಯ ಆವರಣಕ್ಕೆ ತೆರಳುವುದು. ಈ ರ್‍ಯಾಲಿಯಲ್ಲಿ ಪೋಲಿಸರು, ಗೃಹ ರಕ್ಷಕ ದಳದವರು, ಎನ್.ಸಿ.ಸಿ. ಸ್ಕೌಟ್ಸ್ ಗೈಡ್ಸ, ಶಾಲೆ ಮಕ್ಕಳು ಭಾಗವಹಿಸಲಿದ್ದಾರೆ.
ಭೂಕಂಪ, ಸುನಾಮಿ, ಪ್ರವಾಹ, ಬೆಂಕಿ ಅನಾಹುತ,  ಕಟ್ಟಡ  ಕುಸಿತ, ಬಾಂಬ್ ಸ್ಪೋಟ, ಮುಂತಾದ ವಿಪತ್ತುಗಳ ಸಂದರ್ಭದಲ್ಲಿ  ಹಾಗೂ ದೇಶದ  ಆಂತರಿತ  ಭದ್ರತೆಯ ಸಮಯದಲ್ಲಿ  ಗಣೇಶ ಚತುರ್ಥಿ, ಮೊಹರಂ ಮುಂತಾದ ಬಂದೋಬಸ್ತ ಸಂದರ್ಭಗಳಲ್ಲಿ  ಗೃಹರಕ್ಷಕದಳದವರು   ಪೋಲಿಸರಿಗೆ  ಸಹಾಯಕರಾಗಿ  ಕರ್ತವ್ಯ ನಿರ್ವಹಿಸುತ್ತಾರೆ. ಇದೊಂದು ಸಾಮಾಜಿಕ  ಸೇವೆ ಮಾಡಲು  ಪ್ರತಿಯೊಬ್ಬರಿಗೂ  ಅವಕಾಶ ಕಲ್ಪಿಸುವಂತಹದ್ದಾಗಿದೆ. ಸಮಾಜಸೇವೆ ಸಲ್ಲಿಸಲು ಯುವಕರಿಗೆ ಇದು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
ಡೆಪ್ಯೂಟಿ ಕಮಾಂಡೆಂಟ್ ಡಿ.ಕೆ.ಕುಲ್ಕರ್ಣಿ ಅವರು  ಮಾತನಾಡುತ್ತ  ಪ್ರಕೃತಿ  ವಿಕೋಪ ಸುನಾಮಿ ಪ್ರವಾಹ ಪೀಡಿತ, ಬೆಂಕಿ ಅನಾಹುತ ಸಂಭವಿಸಿದಾಗ ಪೋಲಿಸರಿಗೆ ಸಹಾಯಕರಾಗಿ ಹೋಮಗಾರ್ಡ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗುತ್ತಾರೆ.  ಇಂತಹ ಸಂಧರ್ಭಗಳಲ್ಲಿ  ಪೋಲಿಸರೇ ಕೆಲಸ ನಿರ್ವಹಿಸಬೇಕೆಂದಿಲ್ಲ.  ಅವರೊಂದಿಗೆ ಸಾರ್ವಜನಿಕರು ಸಹಭಾಗಿಗಳಾದಲ್ಲಿ ಅನಾಹುತ ಕಡಿಮೆಗೊಳಿಸಲು  ಸಾಧ್ಯವೆಂದು  ತಿಳಿಸಿದರು. ಇನ್‌ಸ್ಪಕ್ಟರ್ ಎನ್.ವೆಂಕಟೇಶ ಅವರು ಹಾಜರಿದ್ದರು.

ಬೆಳಗಾವಿಗೆ ಅಬಕಾರಿ ಸಚಿವರು

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ರಾಜ್ಯದ ಅಬಕಾರಿ ಸಚಿವರಾದ ಶ್ರೀ. ಎಂ.ಪಿ. ರೇಣುಕಾಚಾರ್ಯ ಅವರು ಸೋಮವಾರ ಜನೇವರಿ ೧೮ ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.
ಅಂದು ಮುಂಜಾನೆ ೧೨-೩೦ ಕ್ಕೆ ಬೆಳಗಾವಿಯಲ್ಲಿ ಅಬಕಾರಿ ಇಲಾಖೆಯ ವಿಭಾಗಮಟ್ಟದ ಸಭೆ ನಡೆಸುವರು. ನಂತರ ಸಾಯಂಕಾಲ ೪-೩೦ ಕ್ಕೆ ಸವದತ್ತಿಯಲ್ಲಿ ಶಾಸಕರಾದ ಶ್ರೀ.ಆನಂದ ಮಾಮನಿ ಅವರು ಏರ್ಪಡಿಸಿರುವ ಸಮಾರಂಭದಲ್ಲಿ ಭಾಗವಹಿಸಿ ಧಾರವಾಡಕ್ಕೆ ಪ್ರಯಾಣ ಬೆಳೆಸುವರು.
ಬೆಳಗಾವಿಗೆ ಜವಳಿ ಸಚಿವರು

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ರಾಜ್ಯದ ಜವಳಿ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವರಾದ          ಶ್ರೀ. ಗೂಳಿಹಟ್ಟಿ ಶೇಖರ ಅವರು ಸೋಮವಾರ ಜನೇವರಿ ೧೮ ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.
ಅಂದು ಮುಂಜಾನೆ ೯ ಗಂಟೆಗೆ ಶ್ರೀ. ಗೋಮಟೇಶ ವಿದ್ಯಾಪೀಠದಲ್ಲಿ ಏರ್ಪಡಿಸಿರುವ ಕ್ರೀಡಾಕೂಟ ಉದ್ಘಾಟನೆ ನೆರವೇರಿಸುವರು. ಮುಂಜಾನೆ ೧೧ ಗಂಟೆಗೆ ಕಾದರೊಳ್ಳಿ ಶ್ರೀ. ಅದೃಶ ಶಿವಯೋಗಿಗಳ ಜಯಂತಿ ಸಮಾರಂಭದಲ್ಲಿ ಭಾಗವಹಿಸುವರು. ಸಾಯಂಕಾಲ ೪-೩೦ ಕ್ಕೆ ಬೆಳಗಾವಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸುವರು. ನಂತರ ಬೀರೂರಗೆ ಪ್ರಯಾಣ ಬೆಳೆಸುವರು.
ರಾಷ್ಟ್ರ ಸೇವೆಗೆ ಸನ್ನದ್ದರಾದ ೧೪೭ ಯೋಧರ ಆಕರ್ಷಕ ಪಥಸಂಚಲನ

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ಮರಾಠಾ ಲಘು ಪದಾತಿದಳದಲ್ಲಿ ತರಬೇತಿ ಪಡೆದು ರಾಷ್ಟ್ರದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಲು ಸನ್ನದ್ದರಾಗಿರುವ ೧೪೭ ಪ್ರಶಿಕ್ಷಣ ಪಡೆದ ಯೋಧರ ನಿರ್ಗಮನ ಪಥಸಂಚಲನವು ಇಂದು ಜನಮನ ಸೆಳೆಯಿತು.
ಕಳೆದ ೯ ತಿಂಗಳುಗಳ ಕಾಲ ತರಬೇತಿ ಹೊಂದಿರುವ ಈ ಯೋಧರು ಇಂದು ಮರಾಠಾ ಲೈಟ್ ಇನಫಂಟ್ರಿ ರೆಜಿಮೆಂಟಲ್ ಸೆಂಟರ್‌ನ ವಿಶಿಷ್ಠ ಸೇವಾ ಮೆಡಲ್, ಕಮಾಂಡಂಟ್, ಬ್ರಿಗೇಡಿಯರ್ ಸಂಜಯ ಹೋಲೆ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾಗೂ ರೆಜಿಮೆಂಟಲ್‌ನ ಧ್ವಜದ ಸಮಕ್ಷಮ ಯೋಧರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ತರಬೇತಿ ಅವಧಿಯಲ್ಲಿ ಪಥಸಂಚಲನ, ಅತ್ಯುತ್ತಮ ಪ್ರಶಿಕ್ಷಣಾರ್ಥಿ, ಕ್ಷೇತ್ರ ವಿನ್ಯಾಸ ಹಾಗೂ ಹೊರಾಂಗಣ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆಗೈದ ಯೋಧರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಗೇಡಿಯರ್ ಸಂಜಯ ಹೋಲೆ ಅವರು ಕಳೆದ ೯ ತಿಂಗಳಿಂದ ಅತ್ಯುತ್ತಮ ತರಬೇತಿಯನ್ನು ಪೂರೈಸಿದ್ದಕ್ಕಾಗಿ ಯೋಧರಿಗೆ, ಅವರ ಕುಟುಂಬಕ್ಕೆ ಶುಭಾಶಯ ಹೇಳಿದರು. ಮರಾಠಾ ರೆಜಿಮೆಂಟಲ್‌ನ  ಇತಿಹಾಸ ಹಾಗೂ ಪರಂಪರೆಯನ್ನು ಬೆಳೆಸಬೇಕು. ಅದರಂತೆ ರಾಷ್ಟ್ರ ರಕ್ಷಣೆ ಹಾಗೂ ರೆಜಿಮೆಂಟಲ್‌ನ ಗೌರವ ಕಾಪಾಡುವ ಏಕಮಾತ್ರ ಗುರಿಯನ್ನು ಹೊಂದಲು ಕರೆ ನೀಡಿದ ಅವರು ತಮ್ಮ ಕಠಿಣ ಪರಿಶ್ರಮದಿಂದ ಮುಂದೆ ಬರಬೇಕು ಎಂದು ಕರೆ ನೀಡಿದರು.                                                            ವಾವಿಸಂ.
ಹೊಸ ಕೌಶಲ್ಯಾಭಿವೃದ್ಧಿ ಕೇಂದ್ರದ ಉದ್ಘಾಟನೆ

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ಸುವರ್ಣ ವಸ್ತ್ರ ನೀತಿ ಯೋಜನೆಯಡಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ಹೊಸ ಕೌಶಲ್ಯಾಭಿವೃದ್ಧಿ ಕೇಂದ್ರವು ಸೋಮವಾರ ಜನೇವರಿ ೧೮ ರಂದು ಬೆಳಗಾವಿಯಲ್ಲಿ ಪ್ರಾರಂಭವಾಗಲಿದೆ.
ಅಂದು ಸಾಯಂಕಾಲ ೪-೩೦ ಕ್ಕೆ ಮಾರುತಿ ಗಲ್ಲಿಯಲ್ಲಿರುವ ಅರವಿಂದ ಕಾಂಪ್ಲೇಕ್ಸ್‌ನಲ್ಲಿ ಜವಳಿ ಹಾಗೂ ಯುವಜನ ಸೇವಾ ಸಚಿವರಾದ ಶ್ರೀ. ಗೂಳಿಹಟ್ಟಿ ಶೇಖರ ಅವರು ಈ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ. ಫಿರೋಜ ಶೇಠ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ. ಅಭಯ ಪಾಟೀಲ, ಶ್ರೀ. ಸಂಜಯ ಪಾಟೀಲ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ. ಅಶ್ವಿನಿ ಪಾಟೀಲ, ಜಿಲ್ಲಾಧಿಕಾರಿಗಳಾದ ಡಾ|| ಜೆ. ರವಿಶಂಕರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಏಕರೂಪ್ ಕೌರ್ ಅವರು ಭಾಗವಹಿಸಲಿದ್ದಾರೆ.
ವಂಚನೆ ಪ್ರಕರಣ: ಹೂಡಿಕೆದಾರರು ಮಾಹಿತಿ ನೀಡಲು ಮನವಿ

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ದಾಖಲಾದ ಮಲ್ಟೀ ಲೆವಲ್ ಮಾರ್ಕೇಟಿಂಗ್ ವಂಚನೆ ಪ್ರಕರಣಗಳ ತನಿಖೆಯನ್ನು ಸಿ.ಐ.ಡಿ. ವಿಭಾಗದ ಅಧಿಕಾರಿಗಳು ಈಗಾಗಲೇ ತನಿಖೆಯನ್ನು ವಹಿಸಿಕೊಂಡಿದ್ದಾರೆ.
ಸಿಐಡಿ ಅಧಿಕಾರಿಗಳ ತಂಡ ಈಗಾಗಲೇ ನಗರದ ಪೊಲೀಸ್ ಕ್ಲಬ್‌ನಲ್ಲಿ ಮೊಕ್ಕಾಂ ಹೂಡಿದ್ದು, ದಸ್ತಗಿರಿಯಾದ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಣೆ ಮಾಡುತ್ತಿದ್ದು, ಹಾಗೂ ಇತರ ಸಾಕ್ಷೀದಾರರ ವಿಚಾರಣೆ ನಡೆಸಿರುತ್ತಾರೆ.
ರಿಲಯಬಲ್ ಸರ್ವೀಸಸ್ ಹೆಸರಿನಲ್ಲಿ ಚೆಕ್‌ಗಳ ಮೂಲಕವಾಗಿ ಹಣವನ್ನು ಪಡೆದಿರುವ ಆರೋಪಿ ಆನಂದ ತಾನಾಸಾ ನಾಯಕವಾಡ್‌ನ ಬಳಿಯಲ್ಲಿ ಮತ್ತು ಐ-ಕ್ವಿಜ್, ಸ್ವಿಷ್-ಕ್ಯಾಷ್, ರಿಯಲ್‌ಎಸ್ಟೇಟ್, ಮ್ಯಾಕ್ಸ್-ಗ್ರೋತ್ ಮೊದಲಾದ ಮಲ್ಟೀ ಲೆವಲ್ ಮಾರ್ಕೇಂಗ್ ಸ್ಕೀಮ್‌ಗಳ ಹೆಸರುಗಳಲ್ಲಿ ಹಣ ಹೂಡಿದ ಹೂಡಿಕೆದಾರರು ಯಾವುದೇ ಭಯವಿಲ್ಲದೆ, ಬೆಳಗಾವಿ ನಗರದ ಲಿಂಗರಾಜ ಕಾಲೇಜ್ ಹಿಂಭಾಗದ ರಸ್ತೆಯಲ್ಲಿರುವ ಪೊಲೀಸ್ ಕ್ಲಬ್‌ನಲ್ಲಿರುವ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಬೆಂಗಳೂರನ ವಂಚನೆ ತನಿಖಾ ದಳ, ಸಿಐಡಿ, ಪೊಲೀಸ್ ಇನ್ಸೆಪೆಕ್ಟರ್ ಶ್ರೀ.ಹೆಚ್. ನಾಗರಾಜ ಇವರು ತಿಳಿಸಿದ್ದಾರೆ. ಇವರ ಮೊಬೈಲ್ ಸಂಖ್ಯೆ ೯೪೪೮೪೭೫೧೦೦, ೯೪೪೯೫೦೭೦೮೦ ಗೆ ಕರೆ ಮಾಡಬಹುದಾಗಿದೆ.
ಜಾತ್ರೆಗಾಗಿ ವಿಶೇಷ ಬಸ್ ವ್ಯವಸ್ಥೆ

ಬೆಳಗಾವಿ:ಜನೇವರಿ:೧೬::(ಕರ್ನಾಟಕ ವಾರ್ತೆ): ಸವದತ್ತಿ ಶ್ರೀ. ಯಲ್ಲಮ್ಮದೇವಿ ಮತ್ತು ಚಿಂಚಲಿಯ                      ಶ್ರೀ. ಮಾಯಕ್ಕಾದೇವಿ ಜಾತ್ರೆಯ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗವು ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ]

ಸವದತ್ತಿ ಯಲ್ಲಮ್ಮ ಜಾತ್ರೆಗಾಗಿ ಜನೇವರಿ ೨೦ ರಿಂದ ಫೆಬ್ರುವರಿ ೨ ರವರೆಗೆ ಹಾಗೂ ಚಿಂಚಲಿ ಮಾಯಕ್ಕ ಜಾತ್ರೆಗಾಗಿ ಫೆಬ್ರುವರಿ ೧ ರಿಂದ ೧೦ ರವರೆಗೆ ಚಿಕ್ಕೋಡಿ ವಿಭಾಗದಿಂದ ಕೊಲ್ಲಾಪುರ, ಮಿರಜ, ಸಾಂಗಲಿ, ಚಿಕ್ಕೋಡಿ, ನಿಪ್ಪಾಣಿ, ಸದಲಗಾ, ಹಾರೋಗೇರಿ, ಹಿಡಕಲ್, ಮುಗಳಕೋಡ, ಸಂಕೇಶ್ವರ, ಹುಕ್ಕೇರಿ ಹಾಗೂ ರಾಯಬಾಗಗಳಿಂದ ಮತ್ತು ಮಹಾರಾಷ್ಟ್ರದ ಮುಂಬಯಿ, ಪುಣೆ, ಸಾತಾರ, ರತ್ನಾಗಿರಿ, ಜತ್ತ, ಗಡಹಿಂಗ್ಲಜ ಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆಯೆಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಸಣ್ಣ ನೀರಾವರಿ ಸಚಿವರ ಪ್ರವಾಸ ಕಾರ್ಯಕ್ರಮ
ಮಂಡ್ಯ, ಜ.೧೬(ಕರ್ನಾಟಕ ವಾರ್ತೆ):-ಮಾನ್ಯ ಸಣ್ಣ ನೀರಾವರಿ, ಯೋಜನಾ ಮತ್ತು ಸಾಂಖ್ಯಿಕ ಸಚಿವ ಶ್ರೀ. ಗೋವಿಂದ ಎಂ.ಕಾರಜೋಳ ರವರು ದಿನಾಂಕ ೧೮-೦೧-೨೦೧೦ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅವರು ಅಂದು ಮಧ್ಯಾಹ್ನ ೩-೦೦ ಗಂಟೆಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಶ್ರೀ. ವಿ.ಶ್ರೀನಿವಾಸರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—–
ಜನವರಿ ೧೮ ರಂದು ಜಿಲ್ಲೆಯಲ್ಲಿ ಸಾರಿಗೆ ಸಚಿವರ ಪ್ರವಾಸ
ಮಾನ್ಯ ಸಾರಿಗೆ ಸಚಿವ ಶ್ರೀ. ಆರ್. ಅಶೋಕ ರವರು ಜನವರಿ ೧೮ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅವರು ಅಂದು ಬೆಳಿಗ್ಗೆ ೧೦-೩೦ ಗಂಟೆಗೆ ಮೇಲುಕೋಟೆಯಲ್ಲಿ ಮುಂದುವರೆದ ಕಾಮಗಾರಿಯಲ್ಲಿ ಪೂರ್ಣಗೊಂಡಿರುವ ಬಸ್ ನಿಲ್ದಾಣ ಮತ್ತು ಪಾಂಡವಪುರದ ನೂತನ ಬಸ್ ಘಟಕದ ಉದ್ಘಾಟನೆ ನೆರವೇರಿಸಿದ ನಂತರ ಮಧ್ಯಾಹ್ನ ೩-೦೦ ಗಂಟೆಗೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಲಿರುವ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ೬೬ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಡಾ. ರಾಮೇಗೌಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—–
ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭ
ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಸುಧಾರಣಾ ಪದ್ಧತಿ ಉಪ ವಿಭಾಗ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯ ತಾಲ್ಲೂಕಿನ ಮಾರಗೌಡನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ದಿನಾಂಕ ೧೭-೦೧-೨೦೧೦ ರಂದು ಬೆಳಿಗ್ಗೆ ೧೨-೦೦ ಗಂಟೆಗೆ ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ. ರಾಮಚಂದ್ರಗೌಡರು ಉದ್ಘಾಟಿಸಲಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಎಂ. ಶ್ರೀನಿವಾಸ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪಲ್ಸ್ ಪೊಲಿಯೋ : ಶೇ.೯೮.೦೮ ಸಾಧನೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ ೧೦-೧-೨೦೧೦ ರಿಂದ ೧೩-೧-೨೦೧೦ ರವರೆಗೆ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ ಒಟ್ಟು ೧೯೦೩೨೧ (೦-೫ ವರ್ಷದ) ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಅದರಲ್ಲಿ ೧೮೬೬೬೩ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲಾಗಿದ್ದು, ಶೇಕಡಾ ೯೮.೦೮% ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಪಲ್ಸ್ ಪೊಲಿಯೋ ಚಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ. ಎಲ್. ರಬೀಂದ್ರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲ್ಲೂಕುವಾರು ಪ್ರಗತಿಯ ವಿವರ ಈ ಕೆಳಕಂಡಂತಿದೆ.

ತಾಲ್ಲೂಕಿನ ಹೆಸರು ಗುರಿ ಸಾಧನೆ ಶೇಕಡಾವಾರು
ಮಂಡ್ಯ 48924 47594 97.28%
ಮದ್ದೂರು 27961 27988 100.10%
ಮಳವಳ್ಳಿ 30498 30061 98.57%
ಪಾಂಡವಪುರ 16920 16716 98.79%
ಶ್ರೀರಂಗಪಟ್ಟಣ 16940 17145 101.12%
ಕೃಷ್ಣರಾಜಪೇಟೆ 27793 26622 95.79%
ನಾಗಮಂಗಲ 21285 20537 96.49%
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: