ಮತದಾರರ ಕರಡು ಪಟ್ಟಿ: ಆಕ್ಷೇಪಣೆಗೆ ಅವಕಾಶ

ಮಂಗಳೂರು ಜನವರಿ ೧೯: (ಕರ್ನಾಟಕ ವಾರ್ತೆ)- ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮತದಾರರ ಕರಡು ಪಟ್ಟಿ ಸಿದ್ಧವಾಗಿದ್ದು, ಜ.೧೯ರಂದು ತಾಲೂಕಿನ ಎಲ್ಲ ಗ್ರಾಮ ಲೆಕ್ಕಿಗರ ಹೋಬಳಿ,ಕಂದಾಯ ನಿರೀಕ್ಷಕರ ಮತ್ತು ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಲಾಗಿದೆ. ಈ ಸಂಬಂಧ ಹಕ್ಕು ಹಾಗೂ ಆಕ್ಷೇಪಣೆಯನ್ನು ಮಂಗಳೂರು ತಾಲೂಕು ಕಚೇರಿಗೆ ಸಲ್ಲಿಸಬಹುದಾಗಿದ್ದು, ಆಕ್ಷೇಪಣೆ ಸಲ್ಲಿಸಲು ೩.೨.೧೦ ಕೊನೆಯದಿನ ಎಂದು ಮಂಗಳೂರು ತಾಲೂಕು ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಸ್ತೆ ಸಂಚಾರ ಗಣತಿ ಸಮೀಕ್ಷೆ
ಮಂಗಳೂರು ಜನವರಿ ೧೯: (ಕರ್ನಾಟಕ ವಾರ್ತೆ)- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆ ವಿನ್ಯಾಸಗೊಳಿಸಲು ಅವಶ್ಯಕವಾಗಿರುವ ಹಾಗೂ ರಸ್ತೆಗಳನ್ನು ಏಕಪಥ,ದ್ವಿಪಥ,ಚತುಷ್ಪಥ ಎಂದು ವಿಭಜಿಸಲು ಹಾಗೂ ವಾಹನ ಸಂಚಾರ ದಟ್ಟಣೆಯನ್ನು ತಿಳಿಯಲು ರಸ್ತೆ ಸಂಚಾರ ಗಣತಿಕೇಂದ್ರ ಆರಂಭಿಸಲಾಗಿದೆ ಎಂದು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಂಗಳೂರು ವರ್ತುಲದ ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ ತಿಳಿಸಿದ್ದಾರೆ.
ಫೆ.೧೭ರ ಬೆಳಗ್ಗೆ ೬ ಗಂಟೆಯಿಂದ ೨೪ರ ಬೆ.೬ ಗಂಟೆಯವರೆಗೆ ಸತತವಾಗಿ ಏಳು ದಿನಗಳ ಕಾಲ ಸಮೀಕ್ಷೆ ನಡೆಯಲಿದೆ.
ಜನವರಿ ತಿಂಗಳ ಪಡಿತರ ವಿತರಣೆ
ಮಂಗಳೂರು ಜನವರಿ ೧೯: (ಕರ್ನಾಟಕ ವಾರ್ತೆ)- ೨೦೧೦ರ ಸಾಲಿನ ಜನವರಿ ತಿಂಗಳ ಪಡಿತರ ವಿತರಣೆಯಾಗಿದ್ದು, ಪಡಿತರ ಚೀಟಿದಾರರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಂದ ೩೦.೧.೧೦ರೊಳಗೆ ಪಡಿತರ ಸಾಮಗ್ರಿ ಖರೀದಿಸುವಂತೆ ದಕ್ಷಿಣ ಕನ್ನಡ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಂತ್ಯೋದಯ ಅನ್ನ ಯೋಜನೆಯಡಿ ಕೆ.ಜಿ.ಗೆ ೩ ರೂ.ಗಳಂತೆ ೨೯ಕೆ.ಜಿ ಅಕ್ಕಿ ಮತ್ತು ಕೆ.ಜಿ.ಗೆ ೨ ರೂ.ನಂತೆ ೬ ಕೆ.ಜಿ.ಗೋಧಿ ವಿತರಿಸಲಾಗುವುದು. ಅಕ್ಷಯ ಪಡಿತರ ಚೀಟಿದಾರರಿಗೆ ೧ಯೂನಿಟ್ ಗೆ ೪ ಕೆಜಿಯಂತೆ ಅಕ್ಕಿ ಗರಿಷ್ಠ ಪ್ರಮಾಣ ೨೦ ಕೆ.ಜಿ., ಹಾಗೂ ೩೧.೧೨.೦೯ರವರೆಗೆ ವಿತರಣೆಯಾಗಿರುವ ನೆಮ್ಮದಿ ಮತ್ತು ಬಿಪಿಎಲ್ ಪಡಿತರ ಚೀಟಿಗಳಿಗೆ ಗೋಧಿ ೧ ಕೆ.ಜಿ. ೩ಯೂನಿಟ್ ಗೆ ೨ ಕೆ.ಜಿ., ೪,೫ ಮತ್ತು ಹೆಚ್ಚಿನ ಯೂನಿಟ್ ಗಳಿಗೆ ೩ ಕೆ.ಜಿ., ಕೆ.ಜಿ.ಗೆ ೩ ರೂ.ಗಳಂತೆ ನೀಡಲಾಗುವುದು. ಸಕ್ಕರೆ ಕೆ.ಜಿ.ಗೆ ೧೩.೫೦ಯಂತೆ ಪಡಿತರ ಚೀಟಿಯೊಂದಕ್ಕೆ ೧ಕೆ.ಜಿ ವಿತರಿಸಲಾಗುವುದು.
ಅಡುಗೆ ಅನಿಲ ರಹಿತ ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ೬ ಲೀ.,ನಗರಪ್ರದೇಶದಲ್ಲಿ ೫ಲೀ.,ಗ್ರಾಮಾಂತರ ಪ್ರದೇಶದಲ್ಲಿ ೩ಲೀ.,ಏಕಸದಸ್ಯ ಪಡಿತರ ಚೀಟಿದಾರರಿಗೆ ೨ಲೀ., ಪಡಿತರ ಸೀಮೆಎಣ್ಣೆ ಲೀಟರೊಂದರ ದರ ೯.೨೦ ರೂ., ದ.ಕ ಜಿಲ್ಲಾ ಗ್ರಾಮಾಂತರ ಪ್ರದೇಶಕ್ಕೆ ೯.೫೦ ಲೀಟರ್ ಬಿಡುಗಡೆಯಾಗಿದೆ.

ಆಡಳಿತ ಕನ್ನಡ ತರಬೇತಿ
ಮಂಗಳೂರು ಜನವರಿ ೧೯: (ಕರ್ನಾಟಕ ವಾರ್ತೆ)-ಕರ್ನಾಟಕ ಸರ್ಕಾರ ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡವನ್ನು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಅನುಕೂಲವಾಗುವಂತೆ ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು,ಸಿಬ್ಬಂದಿಗಳಿಗೆ ಆಡಳಿತದಲ್ಲಿ ಕನ್ನಡ ಎಂಬ ವಿಷಯದಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆಡಳಿತ ತರಬೇತಿ ಸಂಸ್ಥೆ ಮೈಸೂರು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇವುಗಳ ಸಹಯೋಗದೊಂದಿಗೆ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ೨೧ರಿಂದ ೨೩ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ೩ ದಿನಗಳ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಈ ಕಾರ್ಯ ಶಿಬಿರವನ್ನು ರಾಜ್ಯದ ಮುಖ್ಯಮಂತ್ರಿಗಳು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜ.೨೧ರಂದು ಮಧ್ಯಾಹ್ನ ೧೨.೩೦ಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಉದ್ಘಾಟಿಸುವರು ಎಂದು ಜಿಲ್ಲಾ ತರಬೇತಿ ಸಂಸ್ಥೇ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ.ಪಂ ತ್ರೈಮಾಸಿಕ ಕೆ.ಡಿ.ಪಿ
ಚಿತ್ರದುರ್ಗ,ಜ.೧೯-
ಚಿತ್ರದುರ್ಗ ತಾಲ್ಲೂಕು ಪಂಚಾಯತ್ ತ್ರೈಮಾಸಿಕ ಕೆ.ಡಿ.ಪಿ. ಸಭೆಯು ಶಾಸಕರಾದ ಎಸ್.ಕೆ.ಬಸವರಾಜನ್‌ರವರ ಅಧ್ಯಕ್ಷತೆಯಲ್ಲಿ ಜನವರಿ ೨೫ ರಂದು ಬೆಳಿಗ್ಗೆ ೧೧ ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ. ========
ಹೆಚ್ಚುವರಿ ಕೊಠಡಿಗಳ ಉದ್ಘಾಟನೆ
ಚಿತ್ರದುರ್ಗ,ಜ.೧೯-
ಚಿತ್ರದುರ್ಗ ತಾಲ್ಲೂಕಿನ ಪಳಿಕಿಹಳ್ಳಿ ಶಾಲೆಯ ಹೆಚ್ಚುವರಿ ಕೊಠಡಿ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ಹಾಗೂ ರಸ್ತೆ ದುರಸ್ಥಿ ಕಾಮಗಾರಿ ಭೂಮಿ ಪೂಜೆಯು ಜನವರಿ ೨೧ ರಂದು ಮಧ್ಯಾಹ್ನ ೧೨.೩೦ ಕ್ಕೆ ಪಳಿಕಿಹಳ್ಳಿಯಲ್ಲಿ ಜರುಗಲಿದೆ.
ಶಾಸಕರಾದ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಜಿ.ಹೆಚ್.ತಿಪ್ಪಾರೆಡ್ಡಿಯವರು ಕೊಠಡಿ ಉದ್ಘಾಟಿಸುವರು. ಸಂಸದರಾದ ಜನಾರ್ಧನಸ್ವಾಮಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ತಾ.ಪಂ. ಅಧ್ಯಕ್ಷೆ ಚಂದ್ರಕಲಾ ಬೋಗೇಶ್, ತಾ.ಪಂ. ಸದಸ್ಯೆ ರತ್ನಮ್ಮ ಹನುಮಂತಪ್ಪ, ಎ.ಪಿ.ಎಂ.ಸಿ ಸದಸ್ಯ ಸಿದ್ದಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಶಂಕರಪ್ಪ ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
========
ಪ್ರಧಾನಮಂತ್ರಿಗಳ ೧೫ ಅಂಶ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನಕ್ಕೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಸೂಚನೆ
ಚಿತ್ರದುರ್ಗ,ಜ.೧೯-
ಅಲ್ಪಸಂಖ್ಯಾತರ ಜನಾಂಗದ ಅಭಿವೃದ್ದಿ ಹಾಗೂ ಏಳಿಗೆಗಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿಗಳ ೧೫ ಅಂಶ ಕಾರ್ಯಕ್ರಮಗಳು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳೂ ೧೫ ಅಂಶ ಕಾರ್ಯಕ್ರಮಗಳ ಪ್ರಗತಿ ಕುರಿತು ಪರಿಶೀಲಿಸಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆಯನ್ನು ಕರೆದು ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಶ್ರೀ ಖುಸ್ರೋ ಖುರೇಶಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿಗಳ ೧೫ ಅಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸುತ್ತಾ ಮಾತನಾಡುತ್ತಿದ್ದರು. ಅಲ್ಪಸಂಖ್ಯಾತರ ಜನರ ಕಲ್ಯಾಣಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೊಂಡು ಅವರಿಗೆ ತಲುಪಿದಾಗ ಅವರ ಏಳಿಗೆ ಸಾಧ್ಯವೆಂದು ತಿಳಿಸಿ, ವಿವಿಧ ಇಲಾಖೆಗಳ ಯೋಜನೆ ಕಾರ್ಯಕ್ರಮಗಳಲ್ಲಿ ನಿಗಧಿಪಡಿಸಿರುವ ಗುರಿಯನ್ನು ಸಾಧಿಸಬೇಕು. ಈ ಬಗ್ಗೆ ಅಧಿಕಾರಿಗಳು ಆಸಕ್ತಿ ವಹಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದರು.
ಶೈಕ್ಷಣಿಕ ವಲಯದಲ್ಲಿ ಅಲ್ಪಸಂಖ್ಯಾತ ಜನಾಂಗದ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯ ಸವಲತ್ತುಗಳನ್ನು ಕಲ್ಪಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿರುವ ಉರ್ದು ಶಾಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಿ ಶಾಲಾ ಕಟ್ಟಡ, ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಕೆಲವು ಕಡೆ ಉರ್ದು ಶಾಲೆಗಳಲ್ಲಿ ಸರಿಯಾದ ರೀತಿಯ ಕೊಠಡಿ, ಪೀಠೋಪಕರಣ, ಶೌಚಾಲಯ ಮುಂತಾದ ಅಗತ್ಯತೆಗಳು ಸುವ್ಯವಸ್ಥಿತವಾಗಿರುವುದಿಲ್ಲ. ಇದನ್ನೆಲ್ಲಾ ಗಮನಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು. ಸರ್ವಶಿಕ್ಷಾ ಅಭಿಯಾನ ಯೋಜನೆಯಡಿ ಉರ್ದು ಶಾಲೆಗಳ ದುರಸ್ತಿ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿರುವುದಾಗಿ ಉಪನಿರ್ದೇಶಕರು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು ೧೮೧೪ ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ ೧೦೯ ಉರ್ದು ಅಂಗನವಾಡಿ ಕೇಂದ್ರಗಳಿವೆ. ಈಗ ಹೊಸದಾಗಿ ಮಂಜೂರಾಗಿರುವ ಅಂಗನವಾಡಿ ಕೇಂದ್ರಗಳಲ್ಲಿ ೨೮ ಉರ್ದು ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಅಲ್ಪಸಂಖ್ಯಾತರ ೬೬ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ಯೋಜನೆ ಜಾರಿಯಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಸಭೆಗೆ ತಿಳಿಸಿದರು. ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದ ೯೫೯ ಫಲಾನುಭವಿಗಳಿಗೆ ವಿಮಾ ಬಾಂಡ್‌ಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿನಿಲಯ ಹಾಗೂ ವಸತಿಶಾಲೆಗಳಲ್ಲಿ ಅಗತ್ಯ ಮೂ ಸೌಕರ್ಯ ಕಲ್ಪಿಸಬೇಕೆಂದು, ಊಟ, ವಸತಿ, ನೀರು, ಶೌಚಾಲಯ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಬೇಕು. ಈಕಡೆ ಹೆಚ್ಚಿನ ಗಮನಹರಿಸಿ ಸುವ್ಯವಸ್ಥಿತವಾಗಿ ಇರುವಂತೆ ಕ್ರಮ ವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ಆಯೋಗದ ಅಧ್ಯಕ್ಷರು ಸೂಚಿಸಿದರು.
ಇಲಾಖೆ ವತಿಯಿಂದ ಕಂಪ್ಯೂಟರ್, ನರ್ಸಿಂಗ್ ಇತ್ಯಾದಿಗಳಲ್ಲಿ ನೀಡುತ್ತಿರುವ ತರಬೇತಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಆಯೋಗದ ಸದಸ್ಯ ಕಾರ್ಯದರ್ಶಿ ಶ್ರೀ ಅವೇಕ್ ಅಹಮದ್ ಅವರು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಸಣ್ಣ ಕೈಗಾರಿಕಾ ಘಟಕಗಳ ಸ್ಥಾಪನೆ ಗುರಿ ೪೬ ಇಟ್ಟುಕೊಂಡಿದ್ದು, ಈವರೆಗೆ ೩೬ ಅಲ್ಪಸಂಖ್ಯಾತರ ಜನಾಂಗಕ್ಕೆ ಸೇರಿದ ಸಣ್ಣ ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದು ಕೈಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಲಾನಯನ ಅಭಿವೃದ್ದಿ ಯೋಜನೆಯಡಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಜನಾಂಗಕ್ಕೆ ಸೇರಿದ ೫೪೮ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಜಿಲ್ಲಾ ಜಲಾನಯನ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯಡಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ಸಹ ಅಲ್ಪಸಂಖ್ಯಾತರ ಜನಾಂಗದ ಫಲಾನುಭವಿಗಳಿಗೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು. ಜಿಲ್ಲಾಧಿಕಾರಿ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಅವರು ತಿಳಿಸಿದರು.
ಪರಿಶೀಲನಾ ಸಭೆಯಲ್ಲಿ ಆಯೋಗದ ಸದಸ್ಯರುಗಳಾದ ಶ್ರೀ ಪೀರ್‌ಖಾನ್, ಶ್ರೀಮತಿ ಶಾಯಿದಾಬೇಗಂ, ಶ್ರೀಮತಿ ಪದ್ಮಾವತಿ, ಶ್ರೀ ಅತೀಕ್ ಅಹಮದ್, ಕಾರ್ಯದರ್ಶಿ ಶ್ರೀ ಮಹಿವುದ್ದೀನ್, ಆಯೋಗದ ಅಧಿಕಾರಿಗಳಾದ ಶ್ರೀ ಅಬ್ದುಲ್ ಅಸ್ಲಂ ಪಾಶಾ ಅವರುಗಳು ಉಪಸ್ಥಿತರಿದ್ದು ಪ್ರಗತಿ ಪರಿಶೀಲಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಂಗೇಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಶಿವರಾಮರೆಡ್ಡಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
========

ಕೃಷ್ಣದೇವರಾಯ ಪಟ್ಟಾಭಿಷೇಕ ಮಹೋತ್ಸವ ಹಂಪಿಯಲ್ಲಿ ೩ ದಿನಗಳ ಜನೋತ್ಸವ
ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ ೧೯ : ಶ್ರೀ ಕೃಷ್ಣದೇವರಾಯ ೫೦೦ ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಬರುವ ಜನವರಿ ೨೭ ರಿಂದ ೨೯ ರವರೆಗೆ ೩ ದಿನಗಳ ಕಾಲ ಹಂಪಿಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಹಾಗೂ ಪಟ್ಟಾಭಿಷೇಕ ಸಮಿತಿಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದಿಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಕರ್ನಾಟಕದ ಶ್ರೇಷ್ಠ ದೊರೆ , ಶ್ರೀ ಕೃಷ್ಣದೇವರಾಯನ ಪಟ್ಟಾಭಿಷೇಕದ ೫೦೦ ನೇ ವರ್ಷಾಚರಣೆಯ ಸಂಸ್ಮರಣೆಗಾಗಿ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿದ್ದು ತನ್ಮೂಲಕ ಅನೇಕ ಚಟುವಟಿಕೆಗಳನ್ನು ಡಿಸೆಂಬರ್ ೨೦ ರಿಂದ ಪ್ರಾರಂಭಿಸಲಾಗಿದೆ . ಈ ಕುರಿತು ವೆಬ್‌ಸೈಟ್ ( ತಿತಿತಿ.ಞಡಿishಟಿಚಿಜevಚಿಡಿಚಿಥಿಚಿ.iಟಿ ) ಲೋಕಾರ್ಪಣೆ ಮಾಡಿದ್ದು , ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈಗಾಗಲೇ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ . ವಿಜಯನಗರ ವೈಭವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಠಿಯಿಂದ ೧೭೫ ತಾಲೂಕುಗಳಿಂದ ಉಚಿತ ಪ್ರವಾಸ ಏರ್ಪಡಿಸಿ ೧೦ ಸಾವಿರ ಮಕ್ಕಳಿಗೆ ಹಂಪಿ ದರ್ಶನ ಹಾಗೂ ವಿಜಯನಗರ ವೈಭವದ ಮಾಹಿತಿ ಒದಗಿಸಲಾಗಿದೆ . ಇದಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೃಷ್ಣದೇವರಾಯನ ವ್ಯಕ್ತಿ ಚಿತ್ರಣ ಹಾಗೂ ವಿಜಯನಗರ ವೈಭವ ಕುರಿತು ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ . ಇದರೊಂದಿಗೆ ವಿಚಾರಗೋಷ್ಠಿ ಹಾಗೂ ಉಪನ್ಯಾಸ ಮಾಲಿಕೆಗಳ ಮೂಲಕ ಗಂಭೀರ ಚಿಂತನೆಗೆ ಮುಂದಾಗಿರುವುದಾಗಿ ಸಚಿವ ಶ್ರೀ ಕಾಗೇರಿ ಅವರು ವಿವರಿಸಿದರು .
ಹಂಪಿಯಲ್ಲಿ ಜರುಗುವ ಮಹೋತ್ಸವದ ಸಮಾರಂಭಕ್ಕೆ ರಾಷ್ಟ್ರದ ಪ್ರಧಾನಿ ಹಾಗೂ ವಿದೇಶಿ ಗಣ್ಯರನ್ನು ಆಹ್ವಾನಿಸುವ ಮೂಲಕ ವಿಜಯನಗರ ಸಾಮ್ರಾಜ್ಯದ ಐತಿಹ್ಯವನ್ನು ಅರುಹಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಈ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಸಂಭ್ರಮ ಬಿಂಬಿಸುವ ಗ್ರಾಮೀಣ ಕ್ರೀಡಾಕೂಟ , ಸಾಹಿತ್ಯ ಚಿಂತನೆ , ಕವಿಗೋಷ್ಠಿ , ಚಿತ್ರಕಲೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು . ಈ ಮಹೋತ್ಸವದಂಗವಾಗಿ ಎರಡು ವಿಭಾಗದ ಚಟುವಟಿಕೆಗಳ ಮೂಲಕ ಜನಮನ ತಲುಪಲು ಯತ್ನಿಸುತ್ತಿದೆ . ಸಾಂಸ್ಕೃತಿಕ ಹಾಗೂ ಬೌದ್ದಿಕ ಚಿಂತನೆ ಮೂಲಕ ಈ ಸುವರ್ಣ ಸಾಮ್ರಾಜ್ಯದ ಮಹತ್ವ ಅನಾವರಣಗೊಳ್ಳಲಿದೆ ಹಾಗೂ ಈ ಗತ ವೈಭವದ ನೆನಪನ್ನು ಶಾಶ್ವತವಾಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಶ್ರೀ ಕಾಗೇರಿ ಈ ಮಹೋತ್ಸವ ಜನೋತ್ಸವವಾಗಿ ಆಚರಣೆಗೊಳ್ಳಲು ಜನಸಮುದಾಯವು ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಪಟ್ಟಾಭಿಷೇಕ ಸಮಿತಿ ಸದಸ್ಯರಾದ ಶ್ರೀ ಶ್ರೀನಿವಾಸ ರೆಡ್ಡಿ ಹಾಗೂ ಶ್ರೀ ಶ್ರೀಪಾದ , ಶ್ರೀ ದತ್ತಾ ಡೋರ್ಲೇ ಅವರುಗಳು ಉಪಸ್ಥಿತರಿದ್ದರು . ಪ್ರಾರಂಭದಲ್ಲಿ ಸಮಿತಿಯ ಸಂಚಾಲಕ ಕಾರ್ಯದರ್ಶಿ ಡಾ|| ವಿಷ್ಣುಕಾಂತ ಎಸ್. ಚಟ್‌ಪಲ್ಲಿ ಸ್ವಾಗತಿಸಿ ಮಹೋತ್ಸವದ ಉದ್ದೇಶ ವಿವರಿಸಿದರು .
-****************-

ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮಗಳಿಗಾಗಿ ೧೦೦ ಬಿ.ಪಿ.ಓ ಕೇಂದ್ರಗಳ ಸ್ಥಾಪನೆ

ಬೆಳಗಾವಿ:ಜನೇವರಿ:೧೯::(ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶಗಳ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲು ಹಾಗೂ ಮಾಹಿತಿ ತಂತ್ರಜ್ಞಾನ ಕೇಂದ್ರದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಠಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ೧೦೦ ಹೊರ ಗುತ್ತಿಗೆ ಸೇವಾ ಕೇಂದ್ರಗಳನ್ನುಬಿ.ಪಿ.ಓ ಪ್ರಾರಂಭಿಸಲಾಗುವುದೆಂದು ರಾಜ್ಯದ ವಸತಿ, ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಸಚಿವರಾದ ಶ್ರೀ. ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹೇಳಿದರು
ಗೋಕಾಕದಲ್ಲಿ ಇಂದು ಚನ್ನಬಸವೇಶ್ವರ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಪ್ರಾರಂಭಿಸಲಾದ ಟ್ರಾನ್ಸ್ ಸೊಲುಷನ್ ಕೇಂದ್ರ (ಬಿ.ಪಿ.ಓ) ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಪ್ರಸಕ್ತ ವರ್ಷ ಈ ೨೦ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇದಕ್ಕಾಗಿ ೮ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಮುಂಬರುವ ವರ್ಷ ೮೦ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ ಗ್ರಾಮೀಣ ಬಿ.ಪಿ.ಓ. ಗಳನ್ನು ಸ್ಥಾಪಿಸಲು ಸರಕಾರದಿಂದ ಹಣಕಾಸು ನೆರವು ನೀಡಲಾಗುವುದು. ಕನಿಷ್ಠ ವಿದ್ಯಾಭ್ಯಾಸ ಹೊಂದಿದ ಗ್ರಾಮೀಣ ಯುವಕ/ಯುವತಿಯರಿಗೆ ಈ ಯೋಜನೆಯಲ್ಲಿ ಉದ್ಯೋಗ ಪಡೆಯಲು ಸಹಾಯವಾಗುವುದು. ಪ್ರತಿ ಕೇಂದ್ರಕ್ಕೆ ಸರಕಾರದ ವತಿಯಿಂದ ೪೦ ಲಕ್ಷ ರೂ.ಗಳನ್ನು ಒದಗಿಸಲಾಗುವುದೆಂದು ಹೇಳಿದರು.
ಗ್ರಾಮೀಣ ಪ್ರದೇಶದ ಯುವಕ/ಯುವತಿಯರು ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಡೆಗಟ್ಟಲು ಇದು ಸಹಾಯವಾಗುತ್ತದೆ. ಪ್ರಥಮ ಹಂತದಲ್ಲಿ ಶ್ರೀರಂಗಪಟ್ಟಣ, ಪಾಲೆಗಾಮ, ಗುಂಡ್ಲುಪೇಟೆ ಹಾಗೂ ಶಿಗ್ಗಾಂವಗಳಲ್ಲಿ ಈಗಾಗಲೇ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬರುವ ಮಾರ್ಚ್ ಅಂತ್ಯಕ್ಕೆ ಇನ್ನೂ ೧೬ ಕೇಂದ್ರಗಳನ್ನು ಸ್ಥಾಪಿಸಲಾಗುವುದೆಂದು ಸಚಿವ ಶ್ರೀ. ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹೇಳಿದರು.
ರಾಜ್ಯದಲ್ಲಿ ೨೦೮೫ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಉದ್ದಿಮೆಗಳಿದ್ದು, ಪ್ರಸಕ್ತ ವರ್ಷ ಈ ಉದ್ದಿಮೆಗಳಿಂದ ೭೫,೦೦೦ ಕೋಟಿ ರೂ.ಗಳ ರಫ್ತನ್ನು ಮಾಡಲಾಗಿದೆ. ಮುಂದಿನ ವರ್ಷ ೧ ಲಕ್ಷ ಕೋಟಿ ರೂ.ಗಳ ರಫ್ತನ್ನು ಮಾಡುವ ಗುರಿಯನ್ನು ರಾಜ್ಯ ಸರಕಾರ ಹೊಂದಿದ್ದು, ೬ ಲಕ್ಷ ಜನರಿಗೆ ಉದ್ಯೋಗವನ್ನು ಕಲ್ಪಿಸಲಾಗುವುದೆಂದು ಹೇಳಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಮಾಹಿತಿ ತಂತ್ರಜ್ಞಾನವನ್ನು ಗ್ರಾಮೀಣ ಪ್ರದೇಶಗಳಿಗೆ ಕರೆದೊಯ್ದು ಜನರ ಬದುಕಿನಲ್ಲಿ ಹೊಸ ನಗುವನ್ನು ತರಲು ಪ್ರಯತ್ನ ಮಾಡಲಾಗುವುದೆಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲೋಕಸಭಾ ಸದಸ್ಯ ಶ್ರೀ. ಸುರೇಶ ಅಂಗಡಿ ಅವರು ವಹಿಸಿದ್ದರು. ಗೋಕಾಕ ಸೂನ್ಯ ಸಂಪಾದನಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದು, ವೇದಿಕೆಯಲ್ಲಿ ಚಿತ್ರನಟ ಶ್ರೀ. ಕಾಶಿ ಹಾಗೂ ಹಿರಿಯ ವಕೀಲರಾದ ಸುರೇಶ ಸೊಲ್ಲಾಪೂರಮಠ ಹಾಗೂ ಶ್ರೀ. ಈರಣ್ಣ ಕಡಾಡಿ ಅವರು ಇದ್ದರು.
ಗುಲಬರ್ಗಾ ವಿಭಾಗದ ೧೪.೯೩ ಲಕ್ಷ ಬಿಪಿಎಲ್ ಕುಟುಂಬಗಳ ಆರೋಗ್ಯ ಚಿಕಿತ್ಸೆಗಾಗಿ ವಾಜಪೇಯ ಆರೋಗ್ಯಶ್ರೀ ಯೋಜನೆ
ಗುಲಬರ್ಗಾ,ಜ.೧೯.(ಕ.ವಾ.)-ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು ವಾಜಪೇಯ ಆರೋಗ್ಯಶ್ರೀ ಯೋಜನೆ ಎಂದು ಪುನರ್ ನಾಮಕರಣ ಮಾಡಲಾಗಿದ್ದು, ಗುಲಬರ್ಗಾ ವಿಭಾಗದ ಆರು ಜಿಲ್ಲೆಗಳ ವ್ಯಾಪ್ತಿಗೊಳಪಡುವ ೩೨ ತಾಲೂಕುಗಳ ಬಡತನ ರೇಖೆಗಿಂತ ಕೆಳಗಿರುವ ೧೪೯೩೯೭೭ ಕುಟುಂಬಗಳ ಸದಸ್ಯರಿಗೆ ಉಚಿತ ಆರೋಗ್ಯ ಚಿಕಿತ್ಸಾ ಸೌಲಭ್ಯದ ಪ್ರಯೋಜನ ಕಲ್ಪಿಸಲಾಗುವುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಜಿ. ಕುಮಾರನಾಯಕ್ ಅವರು ಹೇಳಿದರು.
ಅವರು ಮಂಗಳವಾರ ಗುಲಬರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಯೋಜನೆಯಡಿ ಹೃದ್ರೋಗ್, ಕ್ಯಾನ್ಸರ್ ರೋಗದ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮತ್ತು ಕಿಮೋಥೇರಫಿ, ನರವ್ಯಾಧಿ, ಕಿಡ್ನಿ ಕಾಯಿಲೆ, ಸುಟ್ಟ ಪ್ರಕರಣ, ಬಹು ಅಪಘಾತ ಪ್ರಕರಣ( ಪಾಲಿಟಾಮ್) ವಾಹನ ವಿಮಾ ಹೊರತುಪಡಿಸಿ, ನಿಯೋನ್ಯಾಟಲ್ ಕೇರ್ ಹಾಗೂ ಈ ಯೋಜನೆಯಡಿ ಒಳಪಡಿಸಲಾಗುವ ಇತರ ಚಿಕಿತ್ಸಾ ವಿವರ ಪಟ್ಟಿಗಳ ಅನ್ವಯ ನೆಟ್‌ವರ್ಕ್ ಆರೋಗ್ಯ ಸಂಸ್ಥೆಗಳ ಮೂಲಕ ಆಸ್ಪತ್ರೆ ದಾಖಲಾತಿ, ಶಸ್ತ್ರಚಿಕಿತ್ಸೆ ಹಾಗೂ ಇತರೆ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ತೀವ್ರ ಸ್ವರೂಪದ ರೋಗಗಳ ಉಪಚಾರಕ್ಕಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಹಣ ಖರ್ಚು ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಈ ಕುಟುಂಬಗಳ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಈ ಯೋಜನೆಯನ್ನು ಮೊದಲಬಾರಿಗೆ ಪ್ರಯೋಗಿಕವಾಗಿ ಗುಲಬರ್ಗಾ ವಿಭಾಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಇದನ್ನು ಹಂತ ಹಂತವಾಗಿ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಬಡತನ ರೇಖೆಯ ಕೆಳಗಿರುವ ಪ್ರತಿ ಕುಟುಂಬದ ಫಲಾನುಭವಿಯು ಗರಿಷ್ಠ ೫ ಸದಸ್ಯರಿಗೆ ಅಂದರೆ ಪತಿ, ಪತ್ನಿ ಹಾಗೂ ಅವರ ಮೂವರು ಅವಲಂಬಿತರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಪ್ರತಿ ಕುಟುಂಬದ ಐದು ಸದಸ್ಯರಿಗೆ ಪ್ರತಿ ವರ್ಷಕ್ಕೆ ೩೦೦ ರೂ. ದಂತೆ ಫಲಾನುಭವಿಗಳಿಗೆ ವಂತಿಗೆಯಾಗಿ ಸರ್ಕಾರ ಯೋಜನೆಯನ್ನು ಜಾರಿಗೊಳಿಸುವ ಟ್ರಸ್ಟಿಗೆ ಪಾವತಿಸುವುದು. ಫಲಾನುಭವಿಗಳು ಯಾವುದೇ ವಂತಿಗೆ ಪಾವತಿಸಬೇಕಾಗಿಲ್ಲ. ವಾಗ್ದಾನದ ವಿಮಾ ಮೊತ್ತ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ ೧.೫೦ ಲಕ್ಷ ರೂ. ನಿಗದಿಪಡಿಸಿದ್ದು, ಗರಿಷ್ಠ ಮೊತ್ತ ಮೀರಿದಲ್ಲಿ ೫೦ ಸಾವಿರ ರೂ. ಹೆಚ್ಚುವರಿ ವಿಮಾ ಮೊತ್ತ ಒದಗಿಸಲಾಗುವುದು. ಒಬ್ಬ ಫಲಾನುಭವಿಯು ಗುರುತಿಸಿದ ನೆಟ್‌ವರ್ಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾದ ದಿನದಿಂದ ಚಿಕಿತ್ಸೆ ಪಡೆದು ಹೊರಬರುವವರೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದರು.
ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರಮುಖ ಸುಪರ್ ಸ್ಪೇಷಾಲಿಟಿ ಖಾಸಗಿ ಆಸ್ಪತ್ರೆಗಳನ್ನು ಸಹ ಬಳಸಿಕೊಳ್ಳಲು ಯೋಜಿಸಲಾಗಿದ್ದು, ಈಗಾಗಲೇ ಇಂತಹ ಆಸ್ಪತ್ರೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ರಾಜ್ಯದಾದ್ಯಂತ ಈವರೆಗೆ ೧೩೨ ಆಸ್ಪತ್ರೆಗಳು ಅರ್ಜಿಗಳನ್ನು ಸಲ್ಲಿಸಿದ್ದು, ೩೦ ಆಸ್ಪತ್ರೆಗಳ ತಪಾಸಣೆ ಮುಗಿದಿರುತ್ತವೆ. ಈ ಯೋಜನೆಯಡಿ ೪೦೩ ವಿಶೇಷ ಶಸ್ತ್ರಚಿಕಿತ್ಸಾ ಪ್ರಕರಣಗಳನ್ನು ಗುರುತಿಸಲಾಗಿದ್ದು, ಪ್ರತಿ ಪ್ರಕರಣಕ್ಕೂ ಹಣ ನಿಗದಿಮಾಡಲಾಗಿದೆ. ಸದರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಆರೋಗ್ಯ ಮೇಳ ಹಾಗೂ ಶಿಬಿರಗಳನ್ನು ನಡೆಸಲಾಗುವುದು ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುವುದು. ಆರೋಗ್ಯಶ್ರೀ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಆಯವ್ಯಯದಲ್ಲಿ ೧೦೦ ಕೋಟಿ ರೂ. ನಿಗದಿಪಡಿಸಿದೆ ಎಂದು ಹೇಳಿದರು.
ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ|| ರಜನೀಶ ಗೋಯೆಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ಎನ್. ನಾಯಕ್ ಅವರು ಹಾಜರಿದ್ದರು.
ಫೆಬ್ರವರಿ ೧ಕ್ಕೆ ಗುಲಬರ್ಗಾದಲ್ಲಿ ಬೃಹತ್ ಆರೋಗ್ಯ ಶಿಬಿರ
ಗುಲಬರ್ಗಾ,ಜ.೧೯.(ಕ.ವಾ.)-ವಾಜಪೇಯ ಆರೋಗ್ಯಶ್ರೀ ಯೋಜನೆಯಡಿ ಗುಲಬರ್ಗಾ ನಗರದಲ್ಲಿ ೨೦೧೦ರ ಫೆಬ್ರವರಿ ೧ರಂದು ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ|| ರಜನೀಶ್ ಗೋಯಲ್ ಅವರು ಹೇಳಿದರು.
ಅವರು ಮಂಗಳವಾರ ಗುಲಬರ್ಗಾದಲ್ಲಿ ಬೃಹತ್ ಆರೋಗ್ಯ ಶಿಬಿರದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬೃಹತ್ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಗುಲಬರ್ಗಾ ಮತ್ತು ಯಾದಗಿರ ಜಿಲ್ಲೆಗಳ ಒಟ್ಟು ೫೦೦೦ ಕ್ಕಿಂತ ಅಧಿಕ ಜನರು ಈ ಶಿಬಿರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಗುಲಬರ್ಗಾ ನಗರದಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಗಳು ತಲಾ ಒಂದೊಂದು ತಾಲೂಕನ್ನು ದತ್ತುಪಡೆದು ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಯೋಜನೆಯ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು. ಶಿಬಿರದಲ್ಲಿ ಆಗಮಿಸುವ ಕುಟುಂಬಗಳ ಸದಸ್ಯರ ಆರೋಗ್ಯ ತಪಾಸಣೆ ನಡೆಸಿ ಅವರು ತಿಳಿಸುವ ಆಸ್ಪತ್ರೆಯಲ್ಲಿ ರೋಗಕ್ಕೆ ಸಂಬಂಧಿಸಿದ ಉಚಿತ ಚಿಕಿತ್ಸೆ/ಶಸ್ತ್ರಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ಸುವರ್ಣ ಆರೋಗ್ಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಜಿ. ಕುಮಾರನಾಯಕ್ ಅವರು ಮಾತನಾಡಿ ಗುಲಬರ್ಗಾ ನಗರದಲ್ಲಿ ಫೆಬ್ರವರಿ ೧ರಂದು ನಡೆಸಲಾಗುವ ಬೃಹತ್ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ನೀಡಲು ಈಗಾಗಲೇ ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ೧೭೩೬ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ಎನ್. ನಾಯಕ್ ಅವರು ಮಾತನಾಡಿ ಈ ಬೃಹತ್ ಆರೋಗ್ಯ ಶಿಬಿರದ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡುವ ಕಾರ್ಯ ಚುರುಕುಗೊಳಿಸಬೇಕು. ಈ ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ಹಾಗೂ ಯೋಜನೆಯ ಲಾಭ ಬಡ ಜನರಿಗೆ ತಲುಪಿಸುವಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ, ತಾಲೂಕು ಅಧಿಕಾರಿಗಳ ಮಹತ್ತರ ಜವಾಬ್ದಾರಿಯಾಗಿದೆ ಎಂದರು.
ಕರ್ನಾಟಕ ಆರೋಗ್ಯ ಸುಧಾರಣಾ ಪದ್ಧತಿ ಯೋಜನೆಯ ನಿರ್ದೇಶಕ ಸೆಲ್ವಕುಮಾರ್, ಆರೋಗ್ಯ ವಿಮಾ ನಿರ್ದೇಶಕ ವಿಜಯ, ಜಿಲ್ಲಾಧಿಕಾರಿ ಡಾ|| ಆರ್. ವಿಶಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲ್ಮಾ ಕೆ. ಫಾಹಿಮ್, ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಮಿತ್ರಪಡೆಯ ಸದಸ್ಯರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಜ.೨೧ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ
ಗುಲಬರ್ಗಾ,ಜ.೧೯.(ಕ.ವಾ.)-ಗುಲಬರ್ಗಾ ಮಹಾನಗರ ಪಾಲಿಕೆಯ ಮುಂದೂಡಿದ ಸಾಮಾನ್ಯ ಸಭೆಯು ಮಹಾಪೌರರ ಅಧ್ಯಕ್ಷತೆಯಲ್ಲಿ ೨೦೧೦ರ ಜನವರಿ ೨೧ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಇಂದಿರಾ ಸ್ಮಾರಕ ಸಭಾಂಗಣ (ಟೌನಹಾಲ)ದಲ್ಲಿ ಜರುಗಲಿದೆ. ದಿನಾಂಕ: ೧೮-೧೧-೨೦೦೯ರಂದು ಕಳುಹಿಸಿದ ಕಾರ್ಯಸೂಚಿಯನ್ನು ಪರ್ಯಾಲೋಚನಾಗಾಗಿ ಮಂಡಿಸಲಾಗುವುದು. ಈ ಸಭೆಗೆ ಮಹಾಪೌರರು, ಎಲ್ಲ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ತಪ್ಪದೇ ಹಾಜರಾಗುವಂತೆ ಗುಲಬರ್ಗಾ ಮಹಾನಗರ ಪಾಲಿಕೆಯ ಸಭಾ ಕಾರ್ಯದರ್ಶಿಯವರು ಕೋರಿದ್ದಾರೆ.
ಯೋಜನಾ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ
ಗುಲಬರ್ಗಾ,ಜ.೧೯.(ಕ.ವಾ.)- ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಅವಧಿಗೆ ಯೋಜನಾ ಸಹಾಯಕರ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹೈದ್ರಾಬಾದ ಕರ್ನಾಟಕ ಪ್ರದೇಶದ ಜಾನಪದ ಮತ್ತು ಲಲಿತಕಲೆಗಳ ಕ್ಷೇತ್ರದಲ್ಲಿ ಅನುಭವವಿರುವ ಎಂ.ಎ. ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಕನ್ನಡ/ಇಂಗ್ಲೀಷ್ ಡಿ.ಟಿ.ಪಿ. ಮಾಡುವ ಅನುಭವ ಅಪೇಕ್ಷಣೀಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಯೋಜನಾ ಪ್ರಧಾನ ಸಂಪಾದಕರಾದ ಪ್ರೊ|| ಪಿ.ಕೆ. ಖಂಡೋಬಾ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಗ್ರಂಥಗಳ ಆಯ್ಕೆಗೆ ಆಹ್ವಾನ
ಗುಲಬರ್ಗಾ,ಜ.೧೯.(ಕ.ವಾ.)- ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ, ಪಠ್ಯ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳಲ್ಲಿ ೨೦೦೯ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕನ್ನಡ/ಆಂಗ್ಲ/ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕ, ಲೇಖಕ-ಪ್ರಕಾಶಕ, ಪ್ರಕಾಶಕರು, ಸಂಸ್ಥೆಗಳು ವಿತರಕರಿಂದ ಗ್ರಂಥಗಳನ್ನು ಆಹ್ವಾನಿಸಲಾಗಿದೆ.
ಆಯ್ಕೆಗಾಗಿ ಸಲ್ಲಿಸುವ ಗ್ರಂಥಗಳ ಮೊದಲ ಪುಟದ ಮತ್ತು ಹಿಂಭಾಗದ ಪುಟದಲ್ಲಿ ಶೀರ್ಷಿಕೆ, ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಪುಟಗಳು, ಪುಸ್ತಕದ ಅಳತೆ, ಉಪಯೋಗಿಸಿರುವ ಕಾಗದ, ಗ್ರಂಥಸ್ವಾಮ್ಯದ ಹಕ್ಕು, ಪ್ರಥಮ ಮುದ್ರಣ, ನಂತರದ ಮುದ್ರಣಗಳು, ಬೆಲೆ, ಮುಖಪುಟ, ವಿನ್ಯಾಸ, ಒಳಪುಟ, ರೇಖಾಚಿತ್ರ, ಪ್ರಕಾಶಕರು ಮತ್ತು ಮುದ್ರಕರು ಇತ್ಯಾದಿ ವಿವರಗಳನ್ನು ಮುದ್ರಿಸುವುದು ಕಡ್ಡಾಯವಾಗಿರುತ್ತದೆ. ಆಯ್ಕೆಯಾದ ಪುಸ್ತಕಗಳಿಗೆ ಸರ್ಕಾರ ನಿದಿಪಡಿಸಿದ ಬೆಲೆಯ ಆಧಾರದ ಮೇಲೆ ಬೆಲೆಯನ್ನು ನಿಗದಿಪಡಿಸಲಾಗುವುದು.
ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ೪ನೇ ಮಹಡಿ, ಡಾ|| ಅಂಬೇಡ್ಕರ್ ವೀದಿ, ಬೆಂಗಳೂರು-೫೬೦೦೦೧ ಇವರಿಗೆ ೨೦೧೦ರ ಫೆಬ್ರವರಿ ೧೫ರೊಳಗೆ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿ ಮತ್ತು ವಿವರವಾದ ನಿಬಂಧನೆಗಳಿಗಾಗಿ ಮೇಲ್ಕಂಡ ಕಚೇರಿ ಮತ್ತು ದೂರವಾಣಿ ಸಂಖ್ಯೆ: ೦೮೦-೨೨೮೬೪೯೯೦ ಹಾಗೂ ೨೨೮೬೭೩೫೮ನ್ನು ಸಂಪರ್ಕಿಸಲು ಕೋರಲಾಗಿದೆ.
ಜನವರಿ ೨೫ಕ್ಕೆ ಮುಖ್ಯೋಪಾಧ್ಯಾಯರ ಸ್ಥಾನಪನ್ನ ಬಡ್ತಿಯ ಕೌನ್ಸಿಲಿಂಗ್
ಗುಲಬರ್ಗಾ,ಜ.೧೯.(ಕ.ವಾ.)- ಗುಲಬರ್ಗಾ ವಿಭಾಗದ ಸರ್ಕಾರಿ ಸಹ ಶಿಕ್ಷಕರುಗಳಿಗೆ ಮುಖ್ಯೋಪಾಧ್ಯಾಯರೆಂದು ಸ್ಥಾನಪನ್ನ ಬಡ್ತಿ ನೀಡುವ ಕುರಿತು ಅರ್ಹ ಸಹ ಶಿಕ್ಷಕರುಗಳಿಗೆ ೨೫-೦೧-೨೦೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಗುಲಬರ್ಗಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯದ ಸಭಾಂಗಣದಲ್ಲಿ ಕೌನ್ಸಿಲಿಂಗ್ ನಡೆಸಲಾಗುವುದು. ಅರ್ಹತೆ ಹೊಂದಿರುವ ಸಹ ಶಿಕ್ಷಕರುಗಳು ತಪ್ಪದೇ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹನಿರ್ದೇಶಕ (ಆಡಳಿತ) ಆರ್.ಟಿ. ದೇಸಾಯಿ ಕೋರಿದ್ದಾರೆ.
ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಕಾನೂನಿನ ಅರಿವು ಅತ್ಯಗತ್ಯ
ಗುಲಬರ್ಗಾ,ಜ.೧೯.(ಕ.ವಾ.)-ದೌರ್ಜನ್ಯ, ಹಿಂಸೆ, ಶೋಷಣೆ, ಅನ್ಯಾಯ, ಅತ್ಯಾಚಾರಗಳಿಗೆ ಒಳಗಾಗುವ ಮಹಿಳೆಯರಿಗೆ ಕಾನೂನುಗಳ ಅರಿವಿನ ಕೊರತೆಯೇ ಮುಖ್ಯ ಕಾರಣವಾಗಿದೆ. ಇವುಗಳಿಂದ ಮಹಿಳೆಯರು ಹೊರಬರಬೇಕಾದರೆ ಕಾನೂನಿನ ಸೂಕ್ತ ತಿಳುವಳಿಕೆಯು ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ.ಎಸ್. ಬಿಳ್ಕಿ ಅವರು ಅಭಿಪ್ರಾಯಪಟ್ಟರು. ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರವು ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು, ಅದರ ಲಾಭ ಪಡೆಯುವಂತೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಶೇಡ ಸಂಸ್ಥೆ ಬೀದರ, ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗುಲಬರ್ಗಾ ಇವುಗಳ ಸಂಯುಕ್ತಾಶ್ರಯದಲ್ಲಿ ಗುಲಬರ್ಗಾ ತಾಲೂಕಿನ ತಾಜಸುಲ್ತಾನಪೂರದಲ್ಲಿ ಭಾನುವಾರ ಏರ್ಪಡಿಸಲಾದ ಮಹಿಳೆಯರ ಕಾನೂನುಗಳ ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಮಹ್ಮದ್ ಖಾನ ಪಠಾಣ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಕಾನೂನುಗಳ ಪ್ರಜ್ಞೆ ಹೆಚ್ಚಿದಂತೆ ಅಪರಾಧಗಳ ಸಂಖ್ಯೆ ಕಡಿಮೆಯಾಗಿ, ನೆಮ್ಮದಿಯಿಂದ ಜನ ಬದುಕಲು ಸಾಧ್ಯ. ಇದಕ್ಕೆ ಕಾನೂನು ಅರಿವು ಅವಶ್ಯಕವಾಗಿದೆ. ಕಾನೂನು ನೆರವು ಬೇಡಿ ಕಳೆದ ಆರು ತಿಂಗಳಿನಿಂದ ಪ್ರಾಧಿಕಾರಕ್ಕೆ ಒಂದೂ ಅರ್ಜಿ ಬಂದಿಲ್ಲವೆಂದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ. ಬರುಡೆ ಅತಿಥಿಗಳಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಗುರುದೇವಿ ಎಸ್.ಓಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಷಯ ತಜ್ಞರಾಗಿ ಮಹಿಳಾ ನ್ಯಾಯವಾದಿ ಸರಸಜಾ ರಾಜನ್ ಹೆಣ್ಣು ಮಕ್ಕಳ ಹಕ್ಕುಗಳು ಕುರಿತು ಮಾತನಾಡಿ ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿ ಜಾರಿಗೆ ಬಂದ ಮಹಿಳೆಯರ ವಿವಿಧ ಹಕ್ಕುಗಳ ಬಗ್ಗೆ ತಿಳಿಸುತ್ತ, ಮಹಿಳೆಯರ ಘನತೆ, ಗೌರವಗಳನ್ನು ಹೆಚ್ಚಿಸುವ ಸೂಕ್ಷ್ಮವಾದ ವಿಷಯಗಳ ಮೇಲೂ ಬೆಳಕು ಚೆಲ್ಲಿದರು. ತಮ್ಮ ಹಕ್ಕನ್ನು ಚಲಾಯಿಸಿ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಲು ಕರೆ ನೀಡಿದರು.
ಕುಮಾರಿ ಅನಿತಾ ಡಿ. ಕುಲಕರ್ಣಿಯವರು ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾತನಾಡಿ ಈ ಕಾಯ್ದೆಯನ್ನು ಹೆಣ್ಣುಮಕ್ಕಳು ಯಾವಾಗ, ಎಲ್ಲಿ, ಹೇಗೆ ರಕ್ಷಣೆ ಪಡೆಯಬೇಕೆಂಬುದನ್ನು ವಿವರಿಸಿದರು. ಈ ಕಾಯ್ದೆಯ ನೆರವಿನಿಂದ ಹೆಣ್ಣುಮಕ್ಕಳು ಹಿಂಸೆ, ಭಯ, ಶೋಷಣೆ ಮತ್ತು ಅನ್ಯಾಯವಿಲ್ಲದ ಜೀವನವನ್ನು ನಡೆಸಬಹುದೆಂದರು. ಸಿಡಿಪಿಓ ತಿಪ್ಪಣ್ಣ ಸಿರಸಗಿ ಅವರು ಮಹಿಳೆಯರ ಅಭಿವೃದ್ಧಿಗಾಗಿರುವ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿದರು.
ಬೀದರ ಶೇಡ ಸಂಸ್ಥೆಯ ಅಧ್ಯಕ್ಷ ನಾಗಪ್ಪ ಸಿಬರಗಟ್ಟಿಯವರು ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಿಕೆ ಸತ್ಯಮ್ಮ ನಿರೂಪಿಸಿದರು ಮತ್ತು ನಾಗಮ್ಮ ವಂದಿಸಿದರು. ವಕೀಲರುಗಳಾದ ಹನುಮಂತ ಅಟುರ, ಸತೀಷ್ ಪಾಟೀಲ್, ಬಸವರಾಜ ಪ್ಯಾಟಿ, ಚವಡಗುಂಡ ಮುಂತಾದವರು ಉಪಸ್ಥಿತರಿದ್ದರು. ತಾಜಸುಲ್ತಾನಪೂರದ ವಿಜಯಕುಮಾರ, ಮಲ್ಲಿಕಾರ್ಜುನ, ಮೇಲ್ವಿಚಾರಕಿ ನಾಗಮ್ಮ ಕಾರ್ಯಕ್ರಮದಲ್ಲಿದ್ದರು. ಈ ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.
ಜನವರಿ ೨೨ಕ್ಕೆ ಆರ್.ಟಿ.ಓ. ಕಚೇರಿ ವಾಹನ ಹರಾಜು
ಗುಲಬರ್ಗಾ,ಜ.೧೯.(ಕ.ವಾ.)-ಪ್ರಾದೇಶಿಕ ಸಾರಿಗೆ ಕಚೇರಿಯ ಇಲಾಖಾ ವಾಹನ ಮಹೇಂದ್ರ ಕಮಾಂಡರ್ ಜೀಪ ಸಂಖ್ಯೆ ಕೆಎ೧೩ಜಿ/೯೯೯ನ್ನು ಟೆಂಡರ್ ಕಂ ಬಹಿರಂಗ ಹರಾಜಿನ ಮುಖಾಂತರ ದಿನಾಂಕ: ೨೨-೧-೨೦೧೦ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ವಿಲೇವಾರಿಗೊಳಿಸಲಾಗುವುದು. ಇಚ್ಛೆಯುಳ್ಳವರು ವಾಹನವನ್ನು ವೀಕ್ಷಿಸಬಹುದು ಹಾಗೂ ಟೆಂಡರ್ ಕಂ ಹರಾಜಿನ ಪ್ರತಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಲಗತ್ತಿಸಿದೆ. ಇದಕ್ಕೆ ಸಂಬಂಧಿಸಿದ ಪ್ರತಿಯನ್ನು ಈ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಪಾಟೀಲ್ ಅವರು ತಿಳಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ
ಗುಲಬರ್ಗಾ,ಜ.೧೯.(ಕ.ವಾ.)-ಗುಲಬರ್ಗಾ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ೧೧೪ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗಾಗಿ ಈಗಾಗಲೇ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ಪೂರ್ಣಗೊಳಿಸಿ ೧೧೪ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಹಾಗೂ ಶೇ. ೧೦೦ ಕಾಯ್ದಿರಿಸಿದ ಪಟ್ಟಿಯನ್ನು ೨೦೧೦ರ ಜನವರಿ ೧೮ರಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ವಿಶಾಲ್ ಅವರು ತಿಳಿಸಿದ್ದಾರೆ.
ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ದಿನಾಂಕ: ೨೮-೦೧-೨೦೧೦ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿರುವ ಕೌನ್ಸ್‌ಲಿಂಗ್‌ಗೆ ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ. ದಿನಾಂಕ: ೨೮-೦೧-೨೦೧೦ರಂದೇ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ, ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲಾಗುವುದು. ಕೌನ್ಸ್‌ಲಿಂಗ್ ದಿನದಂದು ಯಾವುದೇ ಅಭ್ಯರ್ಥಿಯು ಗೈರು ಹಾಜರಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ಆಯ್ಕೆ ಪಟ್ಟಿಯಿಂದ ಅವರ ನೇಮಕಾತಿ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಜನವರಿ ೨೩ಕ್ಕೆ ಗುಲಬರ್ಗಾದಲ್ಲಿ ಎಸ್‌ಸಿ ಮಹಿಳಾ ಜಾನಪದ ಕಲಾವಿದರ ಸಮಾವೇಶ
ಗುಲಬರ್ಗಾ,ಜ.೧೯.(ಕ.ವಾ.)-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಜನಾಂಗದ ಮಹಿಳಾ ಜಾನಪದ ಕಲಾವಿದರ ಸಮಾವೇಶದ ಸಮಾರಂಭವನ್ನು ದಿನಾಂಕ: ೨೩-೦೧-೨೦೧೦ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಗುಲಬರ್ಗಾ ನಗರದ ಖೂಬಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಪಶುಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ವಿಭಾಗದ ವಿಭಾಗೀಯ ಸಂಚಾಲಕರು ಮತ್ತು ಮಾಜಿ ಲೋಕಸಭಾ ಸದಸ್ಯ ಬಸವರಾಜ ಪಟೀಲ್ ಸಡಂ ಮತ್ತು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯೆ ಗಿರಿಜಾ ಕಪೂರ ಅವರು ಆಗಮಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕನಾಠಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು. ಚೆನ್ನಬಸಪ್ಪ ಅವರು ವಹಿಸಲಿದ್ದಾರೆ.
ಮಹಿಳಾ ಜಾನಪದ ಸಮಾವೇಶದಲ್ಲಿ ಎರಡು ಗೋಷ್ಠಿಗಳಿದ್ದು, ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ|| ಕೆ. ಸುಮಿತ್ರಾ ಅವರು ವಹಿಸಲಿದ್ದಾರೆ. ಗೋಷ್ಠಿಯ ಪ್ರಬಂಧಕರಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರವಾಚಕರಾದ ಡಾ|| ಎಚ್.ಟಿ. ಪೋತೆ ಅವರು ದಲಿತ ಮಹಿಳಾ ಕಲಾವಿದರ ಸ್ಥಿತಿ-ಗತಿ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಕೊಪ್ಪಳದ ಮಹಿಳಾ ಲೋಕ ಪತ್ರಿಕೆಯ ಸಂಪಾದಕರಾದ ಸಾವಿತ್ರಿ ಮುಜುಮದಾರ ಅವರು ಜಾನಪದ ವೃತ್ತಿ ಮತ್ತು ದಲಿತ ಮಹಿಳೆ ಕುರಿತು ಪ್ರಬಂಧ ಮಂಡಿಸಲಿದ್ದಾರೆ.
ಎರಡನೇ ಗೋಷ್ಠಿ ಕ್ಷೇತ್ರ ತಜ್ಞರು ಮತ್ತು ಕಲಾವಿದರೊಂದಿಗೆ ಚರ್ಚೆ ಕುರಿತು ನಡೆಯಲಿದ್ದು, ಡಾ|| ಡಿ.ಬಿ. ನಾಯಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ತಜ್ಞರಾಗಿ ಡಾ|| ಜಗನ್ನಾಥ ಹೆಬ್ಬಾಳೆ, ಡಾ|| ಚಂದ್ರಕಲಾ ಬಿದರಿ, ಡಾ|| ಹನುಮಂತರಾವ ಬಿ. ದೊಡ್ಡಮನಿ, ಡಾ|| ಅಮೃತಾ ಕಟಕೆ, ಡಾ|| ಶ್ರೀಶೈಲ ನಾಗರಾಳ, ಡಾ|| ನಾಗಾಬಾಯಿ ಬುಳ್ಳಾ, ಡಾ|| ಸೂರ್ಯಕಾಂತ ಸುಜಾದ, ಡಾ|| ಶಾರದಾ ಜಾಧವ ಅವರುಗಳು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಸಾಯಂಕಾಲ ನಾಲ್ಕು ಗಂಟೆಗೆ ಸಮಾರೋಪ ನಡೆಯಲಿದ್ದು, ಅಧ್ಯಕ್ಷತೆಯನ್ನು ವಿಧಾನ ಪರಿಷತ್ತಿನ ಸದಸ್ಯ ಅಲ್ಲಮಪ್ರಭು ಪಾಟೀಲ ನೆಲೋಗಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಮಾರುತಿರಾವ ಡಿ. ಮಾಲೆ ಮತ್ತು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ ಹನಿಫಾ ಶೇಬ್ ಅವರು ಆಗಮಿಸಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೇಶಕರು ಹಾಗೂ ಜಾನಪದ ವಿದ್ವಾಂಸರಾದ ಡಾ|| ಕೆ.ಆರ್. ದುರ್ಗಾದಾಸ್ ಸಮಾರೋಪ ಭಾಷಣ ಮಾಡಲಿದ್ದಾರೆ. ಅಲ್ಲದೆ ರಾಜ್ಯದ ಆಯ್ದ ಕೆಲ ಮಹಿಳಾ ಕಲಾವಿದರಿಂದ ಜಾನಪದ ಕಲಾ ಪ್ರದರ್ಶನವೂ ನಡೆಯಲಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರೂ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರವಾಚಕರಾದ ಡಾ|| ಬಸವರಾಜ ಪೊಲೀಸ್ ಪಾಟೀಲ್ ಅವರು ತಿಳಿಸಿದ್ದಾರೆ.
ಅರಣ್ಯ ಸಂರಕ್ಷಣೆಯಲ್ಲಿ ಗ್ರಾಮಸ್ಥರ ಪಾತ್ರ ಮಹತ್ತರ
ಗುಬರ್ಗಾ,ಜ.೧೯.(ಕ.ವಾ.)- ಅರಣ್ಯ ಸಂರಕ್ಷಣೆಯಲ್ಲಿ ಗ್ರಾಮಸ್ಥರ ಪಾತ್ರ ಬಹು ಮುಖ್ಯವಾಗಿದೆ. ಅರಣ್ಯಗಳ ನಿರ್ವಹಣೆಗಾಗಿ ವಿವಿಧ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಅರಣ್ಯ ಸಂರಕ್ಷಣೆಯನ್ನು ಅತ್ಯಂತ ಜವಾಬ್ದಾರಿಯಿಂದ ಕೈಗೊಳ್ಳಬೇಕೆಂದು ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಮರನಾಥ ಎನ್. ಪಾಟೀಲ್ ಅವರು ಕರೆ ನೀಡಿದರು.
ಅವರು ಮಂಗಳವಾರ ಗುಲಬರ್ಗಾ ಹಾಗೂ ಬಳ್ಳಾರಿ ಅರಣ್ಯ ವೃತ್ತಗಳ ಸಂಯುಕ್ತಾಶ್ರಯದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರದ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಗ್ರಾಮ ಅರಣ್ಯ ಸಮಿತಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ತಾಪಮಾನದ ಏರುಪೇರಿನಿಂದ ಹವಾಮಾನಗಳ ವೈಪರೀತ್ಯ ಉಂಟಾಗುತ್ತಿದ್ದು, ಇದರ ದುಷ್ಪರಿಣಾಮಗಳನ್ನು ತಡೆಗಟ್ಟಲು ಅರಣ್ಯ ಬೆಳೆಸುವುದು ಅತ್ಯವಶ್ಯಕವಾಗಿದೆ. ಅರಣ್ಯೀಕರಣದಿಂದ ಪರಿಸರ ಸಂರಕ್ಷಣೆ ಸಾಧ್ಯ . ಗುಲಬರ್ಗಾ ವಿಭಾಗದಲ್ಲಿ ಖುಷ್ಕಿ ಹಾಗೂ ಬಂಜರು ಭೂಮಿಯನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ದೂರ ಸಂವೇದಿ (ಉಪಗ್ರಹದಿಂದ) ಮಾಹಿತಿಯನ್ನು ಉಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅಭಿವೃದ್ಧಿ ಪಡಿಸಿದ ಭೂಮಿಯುಲ್ಲಿ ಜನೋಪಯೋಗಿ ಜೈವಿಕ ಇಂಧನ, ಔಷಧಿ ಸಸ್ಯ, ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು. ಇದಕ್ಕಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಗುಲಬರ್ಗಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ದೂರ ಸಂವೇದಿ (ಇಸ್ರೊ ರಿಮೋಟ್ ಸೆನ್ಸಿಂಗ ) ಕೇಂದ್ರವನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಅಮರನಾಥ ತಿಳಿಸಿದರು.
ಇದೇ ಸಂದರ್ಭದಲ್ಲಿ ಆದಾಯ ವೃದ್ಧಿಸುವ ಚಟುವಟಿಕೆಗಳ ಮಾರ್ಗ ಸೂಚಿಗಳು ಎಂಬ ಪುಸ್ತಕವನ್ನು ಎಂ.ಎಸ್.ಐ.ಎಲ್. ಅಧ್ಯಕ್ಷ ಡಾ|| ವಿಕ್ರಮ ಪಾಟೀಲ ಬಿಡುಗಡೆ ಮಾಡಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥ ಎಸ್. ನಾಗರಾಜ್ ಅವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಚಿತ್ತಾಪೂರ ಶಾಸಕ ವಾಲ್ಮೀಕಿ ನಾಯಕ , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಯೋಜನೆಗಳು) ಬಿ.ಶಿವನಗೌಡ, ಗುಲಬರ್ಗಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎ. ರಾಧಾದೇವಿ ಮತಿತ್ತರ ಹಿರಿಯ ಅರಣ್ಯ ಅಧಿಕಾರಿಗಳು, ಗುಲಬರ್ಗಾ ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲೆಗಳಿಂದ ಗ್ರಾಮ ಅರಣ್ಯ ಸಮಿತಿಗಳ ಸದಸ್ಯರು ಹಾಗೂ ವನಪಾಲಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಆರ್.ಎಫ್.ಓ.ಸಂತೋಷಕುಮಾರ ಸ್ವಾಗತಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಪಿ.ಪ್ರಕಾಶ ವಂದಿಸಿದರು.
ಜ.೨೦ಕ್ಕೆ ಗುವಿವಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಗುಲಬರ್ಗಾ,ಜ.೧೯.(ಕ.ವಾ.)- ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ದಿನಾಂಕ: ೨೦-೧-೨೦೧೦ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಶ್ರೀ ಕೃಷ್ಣದೇವರಾಯರ ೫೦೦ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯನಗರದ ಆನೆಗೊಂದಿ ವಂಶಸ್ಥರಾದ ಕೃಷ್ಣದೇವರಾಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ|| ಬಿ.ವ್ಹಿ. ವಸಂತಕುಮಾರ ಅವರು ಉಪನ್ಯಾಸ ನೀಡುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ|| ಬಿ.ಜಿ. ಮೂಲಿಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
* * *
ಮಾಹಿತಿ ಹಕ್ಕಿನ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ – ಶ್ರೀ ಸಿದ್ದು ಹುಲ್ಲೋಳಿ
ಬಾಗಲಕೋಟೆ, ಜ.೧೯ (ಕರ್ನಾಟಕ ವಾರ್ತೆ): ಮಾಹಿತಿ ಹಕ್ಕು ಕುರಿತು ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಜಮಖಂಡಿ ತಹಶಿಲ್ದಾರ್ ಶ್ರೀ ಸಿದ್ದು ಹುಲ್ಲೋಳಿ ಅಬಿಪ್ರಾಯ ಪಟ್ಟರು.
ಮಂಗಳವಾರ ಬಾಗಲಕೋಟೆ ವಾರ್ತಾ ಇಲಾಖೆಯು ಜಮಂಖಡಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ಮಾಹಿತಿ ಹಕ್ಕು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಾಗಿನಿಂದ ದಾಖಲೀಕರಣ ಸಮರ್ಪಕವಾಗಿ ಮಾಡಲು, ಪಾರದರ್ಶಕ ಆಡಳಿತವನ್ನು ನಡೆಸಲು ಸಹಕಾರಿಯಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳಿಗೆ ಪ್ರತ್ಯೇಕವಾದ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದ ಟಿ.ಜಿ.ಸಿ ಮತ್ತು ಬೆ.ಹೆಚ್.ಎಸ್.ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಡಾ.ಬಿ.ಎಂ. ನುಚ್ಚಿ ಅವರು ೨೦೦೫ ರ ಮೇ ತಿಂಗಳಲ್ಲಿ ಸಂಸತ್ತಿನಲ್ಲಿ ಒಪ್ಪಿಗೆ ಪಡೆದ ಮಾಹಿತಿ ಹಕ್ಕು ಕಾಯ್ದೆಯು ೨೦೦೫ ರ ಜೂನ್ ೧೫- ಕ್ಕೆ ರಾಷ್ಟ್ರಪತಿಗಳ ಅಂಕಿತದೊಂದಿಗೆ ಅಂಗೀಕರಿಸಲಾಗಿದೆ. ಇದರಿಂದ ಬ್ರಷ್ಠಾಚಾರ ನಿಯಂತ್ರಣ ಮಾಡುವುದು, ಜನಪರ ಆಡಳಿತ ನಡೆಸುವುದು ಮತ್ತು ಪಾರದರ್ಶಕತೆಯನ್ನು ಆಡಳಿತದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ರಾಜಾಧಿಕಾರ, ಸರ್ವಾಧಿಕಾರಗಳ ಕಾಲಕ್ಕಿಂತಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯು ಸಾರ್ವಜನಿಕರಿಗೆ ಒಂದು ವರದಾನವಾಗಿದೆ ಎಂದು ಡಾ.ನುಚ್ಚಿ ಅವರು ತಿಳಿಸಿದರು ಈ ಸಂದಂರ್ಭದಲ್ಲಿ ಮಾತನಾಡಿದ ವಾರ್ತಾಧಿಕಾರಿ ಎಂ.ಪಿ.ಶ್ರೀರಂಗನಾಥ ಅವರು ಇಲಾಖೆಯವತಿಯಿಂದ ಬಾಗಲಕೋಟೆ ಜಿಲ್ಲೆಯ ಬಾಗಲಕೋಟ, ಬೀಳಗಿ,ಮುಧೋಳ, ಮತ್ತು ಜಮಖಂಡಿ ತಾಲೂಕಿನ ಆಯ್ದ ೪೨ ಗ್ರಾಮಗಳಲ್ಲಿ ಡಿಸೆಂಬರ್ ೨೧ ರಿಂದ ಜನವರಿ ೧೦ ರ ವರೆಗೆ ಮಾಹಿತಿ ಹಕ್ಕು ಕುರಿತು ವಿಶೇಷ ಪ್ರಚಾರಾಂದೋಲನ ಏರ್ಪಡಿಸಲಾಗಿದೆ. ಬಾಗಲಕೋಟೆ ತಾಲೂಕಿನ ಕಲಾದಗಿಯ ಶ್ರೀ ಗುರುಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಡಿಸೆಂಬರ್ ೨೩ ರಂದು ಮಾಹಿತಿ ಹಕ್ಕು ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಅಲ್ಲದೆ ಕೇಂದ್ರ ಕಚೇರಿಯಿಂದ ಕಳಿಸಿರುವ ಮಾಹಿತಿ ಹಕ್ಕು ಕಾಯ್ದೆ ಕುರಿತು ಮಡಿಕೆ ಪತ್ರಗಳನ್ನು ಜಿಲ್ಲಾದ್ಯಂತ ವಿತರಿಸುವ ವ್ಯವಸ್ಥೆಮಾಡಲಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಬಿ.ಎಂ.ಚಂಡಕಿ ಅವರು ಪದವಿಪೂರ್ವ ಶಿಕ್ಷಣ ಮಂಡಳಿಯಲ್ಲಿ ಉತ್ತರ ಪತ್ರಿಕೆಗಳನ್ನು ಪುನ: ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಮೂಲಕ ಬಹಳ ಹಿಂದೆಯೇ ಕಾಯ್ದೆಗೆ ಪೂರಕವಾದ ಕಾರ್ಯ ಆರಂಭವಾಯಿತು. ಸಾರ್ವಜನಿಕರು ಸರ್ಕಾರದ ವಿವಿಧ ಯೋಜನೆಗಳ ಹಣದ ವಿಯೋಗದ ಬಗ್ಗೆ ಮಾಹಿತಿ ಪಡೆಯ ಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಬಸವರಾಜಕಲೂತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶ್ರೀ ಸಿ.ಎಂ.ಹಂಚಿನಾಳ ಅವರು ಸ್ವಾಗತಿಸಿದರು. ಶ್ರೀಮತಿ ಹಲ್ಯಾಳ ಅವರು ವಂದಿಸಿದರು ಶ್ರೀಮತಿ ಮಹಾದೇವಿ ಎಂ.ಹಲ್ಯಾಳ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಭಾರ್ಗವಿ ದೇಸಾಯಿ ಅವರು ಪ್ರಾಥನಾ ಗೀತೆಯನ್ನು ಹಾಡಿದರು.

ಅಸಹಾಯಕ ಮಹಿಳೆಯರಿಗೆ ಸಕಾಲದಲ್ಲಿ ಸ್ಪಂದಿಸಲು ಜಿಲ್ಲಾಧಿಕಾರಿಗಳ ಕರೆ
ಬಾಗಲಕೋಟೆ, ಜ.೧೯ (ಕರ್ನಾಟಕ ವಾರ್ತೆ): ವಿವಿಧ ಸಂದರ್ಭಗಳಲ್ಲಿ ತೊಂದರೆಗೊಳಗಾಗುವ ಅಸಹಾಯಕ ಮಹಿಳೆಯರಿಗೆ ಸಕಾಲದಲ್ಲಿ ನೆರವಾಗುವ ದಿಕ್ಕಿನಲ್ಲಿ ಕೆಲಸಮಾಡಬಡಬೇಕೆಂದು ಜಿಲ್ಲಾಧಿಕಾರಿ ಶ್ರೀ ಡಿ.ಎಸ್.ವಿಶ್ವನಾಥ ಅವರು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ತಿಳಿಸಿದರು.
ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳ ಕುರಿತು ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ವ – ಆಧಾರ, ವರದಕ್ಷಣೆ ಕಾಯ್ದೆ, ಸಾಂತ್ವಾನ ಯೋಜನೆ ಮತ್ತಿತರ ಯೋಜನೆಗಳ ಕುರಿತು ಈ ವರೆಗೆ ಆಗಿರುವ ಪ್ರಗತಿಯನ್ನು ಪರಿಶೀಲಿಸಲಾಯಿತು. ಈ ಸಭೆಯಲ್ಲಿ ಜಿಲ್ಲೆಯ ಮಹಿಳಾ ಪರ ಕಾರ್ಯನಿರ್ವಹಿಸುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಮಟ್ಟದ ಸಮಿತಿಗಳ ಸದಸ್ಯರು, ಅಪರ ಜಿಲ್ಲಾಧಿಕಾರಿ ಶ್ರೀ ವೀರಭದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀ ಪಾಟೀಲ್, ಶ್ರೀಮತಿ ಪಾಟೀಲ್ ಶ್ರೀರಾಜೇಂದ್ರ ಜಿಲ್ಲಾ ಶಸ್ತ್ರತಜ್ಞ ಡಾ.ಎಂ.ಜಿ.ಬೀದಿಮನಿ, ಡಿ.ವೈ.ಎಸ್.ಪಿ.ಶ್ರೀ ಪಾಟೀಲ್ ಮತ್ತಿತರರು ಅಧಿಕಾರಿಗಳು ಹಾಜರಿದ್ದರು.

ವಿದ್ಯುತ್ ಮಗ್ಗದ ನೇಯ್ಗೆ ತರಬೇತಿಗೆ ಅರ್ಜಿ ಆಹ್ವಾನ
ಬಾಗಲಕೋಟೆ, ಜ.೧೯ (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಸುವರ್ಣ ವಸ್ತ್ರ ನೀತಿ ಯೋಜನೆ ಅಡಿಯಲ್ಲಿ ೨೦೦೯-೧೦ ನೇ ಸಾಲಿಗೆ ಆಧುನಿಕ ವಿದ್ಯುತ (ರೇಪಿಯರ್) ಮಗ್ಗದಲ್ಲಿ ನೇಯ್ಗೆ ತರಬೇತಿ ಕಾರ್ಯಕ್ರಮವನ್ನು ವಿದ್ಯುತ್ ಮಗ್ಗ ಸೇವಾ ಉಪ-ಕೇಂದ್ರ, ರಬಕವಿ-ಬನಹಟ್ಟಿಯಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿಯ ಅವಧಿಯು ಎರಡು ತಿಂಗಳದ್ದಾಗಿದ್ದು, ತರಬೇತಿಯ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಶಿಷ್ಯೆವೇತನವನ್ನು ನೀಡಲಾಗುವುದು. ತರಬೇತಿಯನ್ನು ಪಡೆಯಲು ಆಸಕ್ತಿವುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಪಡೆದು ಭರ್ತಿಮಾಡಿ ತಾಂತ್ರಿಕ ಸಹಾಯಕರು, ವಿದ್ಯುತ್ ಮಗ್ಗ ಸೇವಾ ಉಪ-ಕೇಂದ್ರ, ಉಮದಿ ಬಿಲ್ಡಿಂಗ್, ನಗರಸಭೆ ಕಾರ್ಯಾಲಯದ ಹತ್ತಿರ, ರಾಂಪೂರ, ರಬಕವಿ-ಬನಹಟ್ಟಿ ಈ ಕಚೇರಿಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ತಾಂತ್ರಿಕ ಸಹಾಯಕರು, ಪೋನ ನಂ: ೨೩೦೯೯೦, ಮೋಬೈಲ ನಂ: ೯೪೮೧೪೦೩೩೧೫ ಇವರನ್ನು ಸಂಪರ್ಕಿಸಬಹುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: