ಕರ್ನಾಟಕ  ಸರ್ಕಾರ
ವಾರ್ತಾ ಇಲಾಖೆ
ನಂ.17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ ಬೆಂಗಳೂರು 560 001. ದೂ. 22028032/34/ ಫ್ಯಾಕ್ಸ್ 22028041

ದಿನಾಂಕ:19-01-2010

ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ

೧.    ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಹಾಗೂ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಂದ ಜನವರಿ ೨೦ ರಂದು ಸಂಜೆ ೪.೦೦ ಗಂಟೆಗೆ ನಗರದ ಕೋರಮಂಗಲದ ಕೆ.ಎಸ್.ಆರ್.ಪಿ. ಕ್ರೀಡಾಂಗಣದಲ್ಲಿ ನಡೆಯಲಿರುವ ೨೦೦೯ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ಗೃಹ  ಮತ್ತು ಮುಜರಾಯಿ ಸಚಿವ ಡಾ ವಿ.ಎಸ್. ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.  ಶ್ರೀಮತಿ ಶಾಂತ ವಿ. ಎಸ್. ಆಚಾರ್ಯ ಅವರು ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.

೨.    ಆರ್ಥಿಕ ಇಲಾಖೆಯ ವತಿಯಿಂದ ಜನವರಿ ೨೦ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ನೂತನ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರ ಹಾಗೂ ನೂತನ ಪಿಂಚಣಿ ಯೋಜನೆ ಟ್ರಸ್ಟ್ ಮತ್ತು ಎನ್.ಎಸ್.ಡಿ.ಎಲ್. ಇವರ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

೩.    ಕಾರ್ಮಿಕ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ಬಿ.ಎನ್. ಬಚ್ಚೇಗೌಡ ಅವರ ಅಧ್ಯಕ್ಷತೆಯಲ್ಲಿ ಜನವರಿ ೨೦ ರಂದು ೧೦.೩೦ ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ೩ ನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಪಂಚಾಯತ್ ಸಭಾಂಗಣ, ಕೆಂಪೇಗೌಡ ರಸ್ತೆ, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿದೆ.

೪.    ಕಾರ್ಮಿಕ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೂ
ಆದ ಶ್ರೀ ಬಿ. ಎನ್. ಬಚ್ಚೇಗೌಡ ಅವರು ಜನವರಿ ೨೦ ರಂದು ಕರ್ನಾಟಕ ಅಭಿವೃದ್ಧಿ    ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆಯ ಸಭೆಯ ನಂತರ ಮಧ್ಯಾಹ್ನ ೧.೧೫ ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.
ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳು, ಛಾಯಾಗ್ರಾಹಕರು ಹಾಗೂ  ವಿದ್ಯುನ್ಮಾನ
ವೀಡಿಯೋಗ್ರಾಹಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕೋರಿದೆ

ನಿರ್ದೇಶಕರ ಪರವಾಗಿ
ಪತ್ರಿಕಾ ಪ್ರಕಟಣೆ
ಜೂನ್‌ನಲ್ಲಿ ೧೦ನೇ ಜೈವಿಕ ತಂತ್ರಜ್ಞಾನ ಮೇಳ- ’ಬೆಂಗಳೂರು ಇಂಡಿಯಾ ಬಯೋ ೨೦೧೦’
ಬೆಂಗಳೂರು, ಜ. ೧೯ (ಕರ್ನಾಟಕ ವಾರ್ತೆ)- ಹತ್ತನೇ ಆವೃತ್ತಿಯ ’ಬೆಂಗಳೂರು ಬಯೋ’ ಈ ಬಾರಿ ’ಬೆಂಗಳೂರು ಇಂಡಿಯಾ ಬಯೋ’ ಎಂಬ ಹೆಸರಿನೊಂದಿಗೆ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ೨೦೧೦ರ ಜೂನ್ ೨ರಿಂದ ೪ರ ವರೆಗೆ ನಡೆಯಲಿದೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಯೋಟೆಕ್ನಾಲಜಿ ವಿಷನ್ ಗ್ರೂಪ್‌ನ ಅಧ್ಯಕ್ಷೆ ಡಾ. ಕಿರಣ್ ಮಜೂಮ್‌ದಾರ್ ಷಾ, ಅಗ್ರಿ ಬಯೋಟೆಕ್ ಮತ್ತು ಬೌದ್ಧಿಕ ಆಸ್ತಿ ಮತ್ತು ಪೇಟೆಂಟ್ ಕುರಿತ ‘ಬಯೋ ಐಪಿ ಝೋನ್’ ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ ಎಂದು ವಿವರಿಸಿದರು.
ಈ ಬಾರಿಯ ’ಬೆಂಗಳೂರು ಇಂಡಿಯಾ ಬಯೋ ೨೦೧೦’ ಕೇವಲ ಕರ್ನಾಟಕವಷ್ಟೇ ಅಲ್ಲ, ಭಾರತ ದೇಶದ ಬಯೋಟೆಕ್ನಾಲಜಿ ಕ್ಷೇತ್ರದ ಪ್ರಗತಿಯನ್ನು ಬಿಂಬಿಸುತ್ತದೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ವಿಜ್ಞಾನಿಗಳು, ಈ ಕ್ಷೇತ್ರದ ದಾರ್ಶನಿಕರು, ವಿವಿಧ ಕಂಪೆನಿಗಳ ಸಿಇಓಗಳು, ವಿದ್ಯಾರ್ಥಿಗಳು, ಸಂಶೋಧಕರು ಭಾಗವಹಿಸಲಿದ್ದಾರೆ.
ಜೈವಿಕ ತಂತ್ರಜ್ಞಾನ ಭವಿಷ್ಯದ ತಂತ್ರಜ್ಞಾನವಲ್ಲ, ಇಂದಿನ ತಂತ್ರಜ್ಞಾನ. ಇಂದು ನಾವು ಎದುರಿಸುತ್ತಿರುವ ಆಹಾರ ಭದ್ರತೆ, ಆರೋಗ್ಯ, ನವೀಕೃತ ಇಂಧನ, ಹವಾಮಾನ ವೈಪರೀತ್ಯದಂತಹ ಜಾಗತಿಕ ಸವಾಲುಗಳಿಗೆ ಜೈವಿಕ ತಂತ್ರಜ್ಞಾನ ಪರಿಹಾರ ಕಂಡು ಹಿಡಿಯಬಲ್ಲದು. ಜೈವಿಕ ತಂತ್ರಜ್ಞಾನ ಅತ್ಯಂತ ಸುರಕ್ಷಿತ ಹಾಗೂ ನಿಯಂತ್ರಿತ ಕ್ಷೇತ್ರ. ಬಿಟಿ ಬದನೆ ಕುರಿತು ಇಂದು ನಡೆಯುತ್ತಿರುವ ಸಾರ್ವಜನಿಕ ಚರ್ಚೆ ವೈಜ್ಞಾನಿಕ ತಳಹದಿಯ ಮೇಲೆ ನಡೆಯಬೇಕೆ ಹೊರತು ಭಾವನಾತ್ಮಕ ತಳಹದಿಯ ಮೇಲಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಅಶೋಕ್ ಕುಮಾರ್ ಸಿ ಮನೋಳಿ ಅವರು ಮಾತನಾಡಿ, ಕಳೆದ ವರ್ಷ ಆರ್ಥಿಕ ಹಿಂಜರಿತದ ಹೊರತಾಗಿಯೂ ಬೆಂಗಳೂರು ಬಯೋ- ೨೦೦೯ಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೈವಿಕ ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದಂತೆ ಭಾರತ ಇಂದು ವಿಶ್ವದಾದ್ಯಂತ ಪ್ರಮುಖ ತಾಣವಾಗಿ ರೂಪುಗೊಂಡಿದೆ. ಜೈವಿಕ ತಂತ್ರಜ್ಞಾನ ವಲಯದಲ್ಲಿ ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳಲು, ಹೊಸದನ್ನು ಅನ್ವೇಷಿಸಲು ಮತ್ತು ಸಹಭಾಗಿತ್ವಕ್ಕಾಗಿಯೂ ಬೆಂಗಳೂರು ಈಗ ಈ ವಲಯದವರ ನೆಚ್ಚಿನ ತಾಣವಾಗಿದೆ. ಜೂನ್‌ನಲ್ಲಿ ನಡೆಯಲಿರುವ ಬೆಂಗಳೂರು ಇಂಡಿಯಾ ಬಯೋ -೨೦೧೦ ಭಾರತ ಸೇರಿದಂತೆ ಜಾಗತಿಕ ಜೈವಿಕ ತಂತ್ರಜ್ಞಾನ ವಲಯಕ್ಕೆ ಹೊಸ ವಹಿವಾಟನ್ನು ದೊರಕಿಸಿಕೊಡುವಲ್ಲಿ ವಿಶೇಷ ಪಾತ್ರವಹಿಸಲಿದೆ ಎಂದು ಆಶಿಸಿದರು.
ವಿಜ್ಞಾನಿಗಳು ಮತ್ತು ಜೈವಿಕ ತಂತ್ರಜ್ಞಾನ ಉದ್ದಿಮೆಗಳ ನಡುವೆ ಸಂವಾದ ನಡೆಸಲು ಇದು ಅತ್ಯುತ್ತಮ ವೇದಿಕೆ. ಈ ಮೇಳದಲ್ಲಿ ಅಮೆರಿಕಾ, ಕೆನಡಾ, ಯುಕೆ, ಫ್ರಾನ್ಸ್, ಚಿಲಿ, ಕ್ಯೂಬಾ, ಮೆಕ್ಸಿಕೊ, ಜರ್ಮನಿ, ಸ್ಪೇನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಜಪಾನ್, ಸಿಂಗಾಪುರ, ಮಲೇಷ್ಯಾ, ಚೀನಾ, ಕೊರಿಯಾ ಮತ್ತು ಯುಎಇ ಸೇರಿದಂತೆ ಹಲವು ದೇಶಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದರು.
ಜೈವಿಕ ತಂತ್ರಜ್ಞಾನ ನೀತಿ: ರಾಜ್ಯ ಸರ್ಕಾರ ಇತ್ತೀಚೆಗೆ ಅತ್ಯಂತ ಉಪಯುಕ್ತ ಜೈವಿಕ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದ್ದು, ಈ ಬಗ್ಗೆ ಉದ್ಯಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೂ ಈಗ ಅನುಷ್ಠಾನದ ಹಂತದಲ್ಲಿದೆ. ಈ ನೀತಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೂ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಮುಂದಿನ ಜೂನ್ ವೇಳೆಗೆ ರಾಜ್ಯದಲ್ಲಿ ೧೦ ಬಿಟಿ ಫಿನಿಷಿಂಗ್ ಸ್ಕೂಲ್ ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಎರಡನೇ ಹಂತದ ನಗರಗಳಲ್ಲಿ ಜೈವಿಕ ತಂತ್ರಜ್ಞಾನ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಅವುಗಳಿಗೆ ಪ್ರೋತ್ಸಾಹಕ ಯೋಜನೆಗಳನ್ನೂ ಈ ನೀತಿಯಲ್ಲಿ ಘೋಷಿಸಲಾಗಿದೆ ಎಂದು ಅವರು ವಿವರಿಸಿದರು.
ವಿಷನ್‌ಗ್ರೂಪ್‌ನ ಸದಸ್ಯರಾದ ಪ್ರೊ. ಶರತ್‌ಚಂದ್ರ, ಡಾ. ನಾರಾಯಣನ್ ಹಾಗೂ ಡಾ. ಪದ್ಮನಾಭನ್, ಕೆಬಿಟ್ಸ್ ನಿರ್ದೇಶಕ ಶ್ರೀ ಅರವಿಂದ ಜನ್ನು ಮೊದಲಾದವರು ಉಪಸ್ಥಿತರಿದ್ದರು.

ಪರವಾನಿಗೆ ಭೂಮಾಪಕರ ಮುಷ್ಕರದಿಂದ ನಕ್ಷೆ ವಿತರಣೆಯಲ್ಲಿ ವಿಳಂಬವಾಗಿಲ್ಲ್ಲ- ರಾಜೀವ್ ಚಾವ್ಲಾ
ಬೆಂಗಳೂರು, ಜ ೧೯, (ಕರ್ನಾಟಕ ವಾರ್ತೆ) – ಪರವಾನಗಿ ಭೂಮಾಪಕರ ಮುಷ್ಕರದಿಂದ ಸಾರ್ವಜನಿಕರಿಗೆ ನಕ್ಷೆ ಸಿದ್ಧಪಡಿಸಿ ವಿತರಿಸುವ ಕಾರ್ಯದಲ್ಲಿ ವಿಳಂಬವಾಗುತ್ತಿಲ್ಲವೆಂದು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರಾದ ಶ್ರೀ ರಾಜೀವ್ ಚಾವ್ಲಾ ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ೨೦ ದಿನಗಳಿಂದ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪರವಾನಗಿ ಭೂಮಾಪಕರು ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ನಕ್ಷೆ ಸಿದ್ಧಪಡಿಸಿ ವಿತರಿಸಲು ತೊಂದರೆಯಾಗುತ್ತಿದೆಯೆಂದು ಕೆಲವು ಮಾಹಿತಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ಕಾರಣ ಪತ್ರಿಕಾಗೋಷ್ಠಿಯಲ್ಲಿ ಅವರು ಸ್ಪಷ್ಟನೆಯನ್ನು ನೀಡಿದರು.

ಪರವಾನಿಗೆ ಭೂಮಾಪಕರ ಮುಷ್ಕರದಿಂದ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಗಮನಿಸಿ ಮಾನ್ಯ ಕಂದಾಯ ಸಚಿವರು ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆಯನ್ನು ಏರ್ಪಡಿಸಲಾಗಿತ್ತು, ಹಾಗೂ ಎರಡು ಬಾರಿ ಪರವಾನಗಿ ಭೂಮಾಪಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು.  ಆದಾಗ್ಯೂ ಅವರು ಮುಷ್ಕರವನ್ನು ಕೈಬಿಡದ ಕಾರಣ ತಮ್ಮ ಇಲಾಖೆಯಲ್ಲಿರುವ ೨೦೦೦ ಭೂಮಾಪಕರು ಹಾಗೂ ಇತರೆ ಸಿಬ್ಬಂದಿಗಳನ್ನು ಬಳಸಿಕೊಂಡು ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗಳ ಮೂಲಕ ಎಲ್ಲಾ ರೀತಿಯ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

ಪರವಾನಗಿ ಭೂಮಾಪಕರು ಮುಷ್ಕರ ಹೂಡಿದ ದಿನಾಂಕ ೨೯-೧೨-೨೦೦೯ ರಂದು ೨೯,೯೩೨ ಅರ್ಜಿಗಳು ಬಾಕಿ ಇದ್ದು ದಿನಾಂಕ ೨೯-೧೨-೨೦೦೯ ರಿಂದ ೧೮-೧-೨೦೧೦ ರವರೆಗಿನ ಅವಧಿಯಲ್ಲಿ ೧೫,೪೩೨ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ದಿನಾಂಕ ೨೯-೧೨-೨೦೦೯ ರಿಂದ ೧೮-೧-೨೦೧೦ ರವರೆಗೆ ೪,೮೩೩ ನಕ್ಷೆಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದ್ದು ೧೪,೫೬೧ ನಕ್ಷೆಗಳು ವಿವಿಧ  ಹಂತಗಳಲ್ಲಿ ಸಿದ್ಧವಾಗುತ್ತಿದ್ದು ಕೆಲವೇ ದಿನಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿರುವುದರಿಂದ ದಿನಾಂಕ ೧೮-೧-೨೦೧೦ ರವರೆವಿಗೆ ೨೫,೯೬೮ ಅರ್ಜಿಗಳು ಬಾಕಿ ಇರುವುದಾಗಿ ಅವರು ಮಾಹಿತಿ ನೀಡಿದರು.
ನೇರ ನೇಮಕಕ್ಕೆ ಅವಕಾಶವಿಲ್ಲ:
ಇಲಾಖೆಯಲ್ಲಿ ಖಾಲಿ ಇರುವ ೪೦೦ ಭೂಮಾಪಕರ ಹುದ್ದೆಗಳಿಗೆ ತಮ್ಮನ್ನೇ ನೇರವಾಗಿ ನೇಮಿಸಿಕೊಳ್ಳಬೇಕೆಂಬುದು ಪರವಾನಿಗೆ ಭೂಮಾಪಕರ ಪ್ರಮುಖ ಬೇಡಿಕೆಯಾಗಿದೆ.  ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ.  ಆದ್ದರಿಂದ ೨ ವರ್ಷ ಪರವಾನಿಗೆ ಭೂಮಾಪಕರಾಗಿ ತಾವೇ ನಿರ್ವಹಿಸಿರುವ ಎಲ್ಲರಿಗೂ ನೇಮಕಾತಿ ಸಮಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.   ಅವರಿಗೆ ಲಿಖಿತ ಪರೀಕ್ಷೆಯಲ್ಲಿ ಗಣಿತ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳದೇ ಅವರ ನಿರ್ವಹಿಸಿದ ಸೇವೆ ಕಾರ್ಯದ ಕುರಿತಾಗಿಯೇ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ನಕ್ಷೆ ವಿತರಣೆಗೆ ತೊಂದರೆಯಾಗದಂತೆ ಅಗತ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಆದರೂ ನಕ್ಷೆ ಪಡೆಯುವಲ್ಲಿ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಕೂಡಲೇ ತಹಶೀಲ್ದಾರ್ ಅಥವಾ ಉಪ ವಿಭಾಗಾಧಿಕಾರಿ ಅಥವಾ ಭೂದಾಖಲೆಗಳ ಉಪ ನಿರ್ದೇಶಕರು ಅಥವಾ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ತಮ್ಮ ಅರ್ಜಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಜಾರಿಗೆ ತರಲಾಗಿರುವ ನೋಂದಣಿ ಪೂರ್ವನಕ್ಷೆ (೧೧ ಇ) ವಿತರಿಸುವ ಯೋಜನೆಯ ಹಿನ್ನೆಲೆ ಕುರಿತು, ಈ ನಕ್ಷೆಪಡೆಯುವ ವಿಧಾನ, ಪರವಾನಗಿ  ಭೂಮಾಪಕರು,  ಅವರ ಬೇಡಿಕೆ ಹಾಗೂ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ, ಇಲಾಖೆಯ ಉಪ ನಿರ್ದೇಶಕರಾದ ಶ್ರೀ ರುದ್ರೇಶ್ ಮಾಹಿತಿ ನೀಡಿದರು.

ಕೆಪಿಎಸ್‌ಸಿ ಯಿಂದ ಸಂದರ್ಶನ

ಬೆಂಗಳೂರು, ಜ ೧೯, (ಕರ್ನಾಟಕ ವಾರ್ತೆ) – ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿನ ೨೧೪ ಗ್ರಾಮ ಪಂಚಾಯಿತಿ ಕಾರ್ಯದರ್ಶಿ-ಕಮ್-ಗ್ರಾಮೀಣಾಭಿವೃದ್ಧಿ ಸಹಾಯಕರು ಗ್ರೇಡ್-೧ ರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಫೆಬ್ರವರಿ ೧ ರಿಂದ ೯ ರವರೆಗೆ ಸಂದರ್ಶನವನ್ನು ಆಯೋಗದ ಕೇಂದ್ರ ಕಚೇರಿ, ಉದ್ಯೋಗ ಸೌಧ, ಬೆಂಗಳೂರು – ೧ ಇಲ್ಲಿ ನಡೆಸಲಾಗುತ್ತಿದೆ.

ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದೆ.  ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಹಾಗೂ ಪ್ರವರ್ಗವಾರು ಕೊನೆಯ ಅಭ್ಯರ್ಥಿಗಳು ಗಳಿಸಿರುವ ಪ್ರತಿಶತ ಅಂಕಗಳ ವಿವರಗಳನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿದ್ದು, ಆಯೋಗದ ವೆಬ್‌ಸೈಟ್  http://kpsc.kar.nic.in ನಲ್ಲಿ ನೋಡಬಹುದು.  ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರ ತಲುಪದೇ ಇದ್ದಲ್ಲಿ ಆಯೋಗದ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

ಶಿಕ್ಷಣ ಸಂವಾದ ನೇರ ಫೋನ್ ಇನ್ ಕಾರ್ಯಕ್ರಮ
ಬೆಂಗಳೂರು, ಜ ೧೯, (ಕರ್ನಾಟಕ ವಾರ್ತೆ) –  ಜನವರಿ ೨೧ ರಂದು ರಾತ್ರಿ ೯.೩೦ ರಿಂದ ೧೦.೩೦ ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಕಾಗೇರಿ ವಿಶ್ವೇಶ್ವರ ಹೆಗಡೆ ಅವರ ನೇತೃತ್ವದಲ್ಲಿ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ರಾಜ್ಯಾದ್ಯಂತ ಪ್ರಸಾರವಾಗುವ KSQAO ಎಂಬ ವಿಷಯದ ಬಗ್ಗೆ ಆಕಾಶವಾಣಿ ಶಿಕ್ಷಣ ಸಂವಾದ ನೇರಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ಭಾಗವಹಿಸಿ ಪ್ರಶ್ನೆಗಳಿಗೆ ಉತ್ತರಿಸುವರು.
ಸಾರ್ವಜನಿಕರು, ಪೋಷಕರು, ತಜ್ಞರು, ಅಧಿಕಾರಿಗಳು ಹಾಗೂ ಇತರೆ ವರ್ಗದವರೂ ದೂರವಾಣಿ ಸಂಖ್ಯೆ 080-22370477.22370488.22370499 ರ ಮೂಲಕ ಸಂಪರ್ಕಿಸಿ ಪ್ರಶ್ನಿಸಬಹುದು ಮತ್ತು ಹೆಚ್ಚಿನ ಮಾಹಿತಿ ಪಡೆಯಬಹುದು ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: